ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರಗೊಂಡಿರುವ ಡಿನ್ನರ್ ಪಾಲಿಟಿಕ್ಸ್ ನಲ್ಲಿ, ಡಿಕೆ ಶಿವಕುಮಾರ್ ತಮ್ಮ ಆಪ್ತರೊಂದಿಗೆ ಔತಣ ಕೂಟ, ಸಭೆ ನಡೆಸಿದರು. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆ, ಯತೀಂದ್ರ ಹೇಳಿಕೆಗಳಿಗೆ ಕಡಿವಾಣ, ಹಾಗೂ ದೆಹಲಿಯಲ್ಲಿ ಸಿಎಂ ಸ್ಥಾನಕ್ಕೆ ಹಕ್ಕು ಮಂಡಿಸುವ ಬಗ್ಗೆ ಚರ್ಚೆಗಳು ನಡೆದವು. ಕಾಂಗ್ರೆಸ್ ರಾಜಕಾರಣದಲ್ಲಿ ಇದು ತೀವ್ರ ಕುತೂಹಲ ಮೂಡಿಸಿದೆ. ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ.
ಬೆಳಗಾವಿ, ಡಿಸೆಂಬರ್ 12: ಬೆಂಗಳೂರಿನಲ್ಲಿ ನಡೆಯುತ್ತಿದ್ದ ರಾಜಕೀಯ ಡಿನ್ನರ್ ಸಭೆಗಳು ಇದೀಗ ಬೆಳಗಾವಿಗೆ ವರ್ಗಾವಣೆಯಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರೊಂದಿಗೆ ಡಿನ್ನರ್ ಮೀಟಿಂಗ್ ಮಾಡಿದ ಮರುದಿನವೇ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತ ಬಣದೊಂದಿಗೆ ಬೆಳಗಾವಿಯಲ್ಲಿ ರಾತ್ರಿ ಭೋಜನ ಕೂಟ, ಸಭೆ ನಡೆಸಿದ್ದಾರೆ. ಬೆಳಗಾವಿಯ ದೊಡ್ಡಣ್ಣವರ್ ಫಾರ್ಮ್‌ಹೌಸ್‌ನಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ 30ಕ್ಕೂ ಹೆಚ್ಚು ಶಾಸಕರು, ಮೂರರಿಂದ ನಾಲ್ವರು ಸಚಿವರು ಹಾಗೂ ಡಿಕೆ ಸುರೇಶ್ ಭಾಗವಹಿಸಿದ್ದರು. ಈ ಸಭೆಯ ಮುಖ್ಯ ಚರ್ಚಾ ವಿಷಯಗಳಲ್ಲಿ ಯತೀಂದ್ರ ಅವರ ಹೇಳಿಕೆಗಳಿಗೆ ಕಡಿವಾಣ ಹಾಕುವುದು ಮತ್ತು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಆಕಾಂಕ್ಷೆ ಸೇರಿವೆ ಎನ್ನಲಾಗಿದೆ. ಡಿಕೆ ಶಿವಕುಮಾರ್ ಕೆಲವೇ ದಿನಗಳಲ್ಲಿ ದೆಹಲಿಗೆ ತೆರಳಲಿದ್ದು, ಸಿಎಂ ಸ್ಥಾನಕ್ಕೆ ಹೇಗೆ ಹಕ್ಕು ಮಂಡಿಸಬೇಕು ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ಟಿವಿ9ಗೆ ಮಾಹಿತಿ ಲಭ್ಯವಾಗಿದೆ.
