ಪ್ರಧಾನಿ ಮೋದಿ ಸಂಚರಿಸೋ ರಸ್ತೆ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆ: ಶಂಕಿತ ವ್ಯಕ್ತಿ ಪೊಲೀಸ್ ವಶಕ್ಕೆ
ಪ್ರಧಾನಿ ನರೇಂದ್ರ ಮೋದಿ ಅವರು ಸಂಚರಿಸಿದ ಬೆಂಗಳೂರು ಹೊರವಲಯದ ಕಗ್ಗಲಿಪುರದ ತಾತಗುಣಿ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಈ ಘಟನೆ ಆತಂಕಕ್ಕೆ ಕಾರಣವಾಗಿದ್ದು, ಒಬ್ಬ ಶಂಕಿತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರು ನಗರ ಮತ್ತು ರಾಮನಗರ ಪೊಲೀಸರು ಜಂಟಿ ತನಿಖೆ ಕೈಗೊಂಡಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಬೆಂಗಳೂರು, ಮೇ 10: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆತಂಕಕಾರಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಹೊರವಲಯದ ಕಗ್ಗಲಿಪುರ ಗ್ರಾಮದ ತಾತಗುಣಿ ಬಳಿ, ಪ್ರಧಾನಿ ಮೋದಿ ಸಂಚರಿಸುವ ರಸ್ತೆ ಮಾರ್ಗದ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಪ್ರಧಾನಮಂತ್ರಿಯವರ ಆರ್ಟ್ ಆಫ್ ಲಿವಿಂಗ್ ಆಶ್ರಮ ಭೇಟಿಯ ಮಾರ್ಗದಲ್ಲಿ ಈ ಜಿಲೆಟಿನ್ ಕಡ್ಡಿಗಳು ದೊರೆತಿವೆ. ಈ ಸಂಬಂಧ ಓರ್ವ ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರು ನಗರ ಪೊಲೀಸ್ ಮತ್ತು ರಾಮನಗರ ಪೊಲೀಸರು ಜಂಟಿಯಾಗಿ ಈ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ.
ಜಿಲೆಟಿನ್ ಕಡ್ಡಿಗಳು ಉದ್ದೇಶಪೂರ್ವಕವಾಗಿ ಇರಿಸಲಾಗಿದೆಯೇ ಅಥವಾ ಇದರ ಹಿಂದಿನ ಉದ್ದೇಶವೇನು ಎಂಬುದು ಪೊಲೀಸರ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಸದ್ಯಕ್ಕೆ, ಈ ಘಟನೆ ಆತಂಕ ಹಾಗೂ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಶಕ್ಕೆ ಪಡೆದಿರುವ ವ್ಯಕ್ತಿಯ ಹಿನ್ನೆಲೆ ಮತ್ತು ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ದೊರೆಯಬೇಕಿದೆ.
ಏತನ್ಮಧ್ಯೆ, ಜಿಲೆಟಿನ್ ಕಡ್ಡಿ ಪತ್ತೆ ವಿಚಾರವಾಗಿ ಬೆಂಗಳೂರಿನಲ್ಲಿ ಕೇಂದ್ರ ವಲಯ ಡಿಐಜಿ ಎಸ್.ಗಿರೀಶ್ ಮಾಹಿತಿ ನೀಡಿದ್ದು, ಯಾರು ಇಟ್ಟಿದ್ದಾರೆ ಎಂಬುದು ಪತ್ತೆಯಾಗಿಲ್ಲ. ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
