ಡಾ ರಾಜ್ ಕನಸಿನ ಕೂಸಾಗಿರುವ ಮೈಸೂರಿನ ಶಕ್ತಿಧಾಮ ಆಶ್ರಮಕ್ಕೆ ಪುನೀತ್ ರಾಜ್ ಕುಮಾರ್ ಎಲ್ಲವೂ ಆಗಿದ್ದರು

ಡಾ ರಾಜ್ ಕನಸಿನ ಕೂಸಾಗಿರುವ ಮೈಸೂರಿನ ಶಕ್ತಿಧಾಮ ಆಶ್ರಮಕ್ಕೆ ಪುನೀತ್ ರಾಜ್ ಕುಮಾರ್ ಎಲ್ಲವೂ ಆಗಿದ್ದರು

TV9 Web
| Updated By: preethi shettigar

Updated on: Oct 31, 2021 | 10:06 AM

ಆದರೆ ಶಕ್ತಿಧಾಮ ಡಾ ರಾಜ್ ಅವರ ಕನಸಾಗಿರುವುದರಿಂದ ಅದರಲ್ಲಿರುವ ಮಹಿಳೆಯರಿಗೆ, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಪುನೀತ್ ನೋಡಿಕೊಳ್ಳುತಿದ್ದರು.

ಡಾ ರಾಜ್ ಕುಮಾರ್ ಆಶಯದಂತೆ ಮೈಸೂರಿನಲ್ಲಿ ಸ್ಥಾಪಿಸಲಾಗಿರುವ ಅನಾಥ ಹೆಣ್ಣುಮಕ್ಕಳ ಕೇಂದ್ರ ಶಕ್ತಿಧಾಮದ ಮಕ್ಕಳಿಗೆ ಅಕ್ಷರಶಃ ಅನಾಥ ಪ್ರಜ್ಞೆ ಕಾಡುತ್ತಿದೆ. ಅವರೆಲ್ಲರ ಪ್ರೀತಿಯ ಅಣ್ಣ, ಪುನೀತ್ ಅಂಕಲ್ ಮತ್ತು ಅಪ್ಪು ಸರ್ ಅವರ ಹಠಾತ್ ನಿಧನ ಇಲ್ಲಿನ ಮಕ್ಕಳು ಚೇತರಿಸಿಕೊಳ್ಳಲು ಕಷ್ಟವಾಗುವ ಆಘಾತ ನೀಡಿದೆ. ಪುನೀತ್ ಈ ಆಶ್ರಮ ಎಲ್ಲ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದರು. ಆಶ್ರಮದ ಸಂಸ್ಥಾಪಕಿ ಪಾರ್ವತಮ್ಮ ರಾಜಕುಮಾರ ಅವರು ವಿಧಿವಶರಾದ ನಂತರ ಅದರ ಉಸ್ತುವಾರಿಯನ್ನು ಹೆಗಲಿಗೇರಿಸಿಕೊಂಡ ಪುನೀತ್ ಮಕ್ಕಳ ಪಾಲಿಗೆ ಎಲ್ಲವೂ ಆಗಿದ್ದರು.

ಮೊದಲೆಲ್ಲ ಅಬಲೆಯರ ಆಶ್ರಮಕ್ಕೆ ಅನುದಾನ ಸಿಗುತ್ತಿತ್ತು. ಯಾಕೆಂದರೆ ಅತ್ಯುತ್ತಮವಾಗಿ ನಿರ್ವಹಿಸಲ್ಪಡುತ್ತಿದ್ದ ಇಂಥ ಆಶ್ರಮಗಳಿಗೆ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗಿನ ಸರ್ಕಾರವು ಸಾಂತ್ವನ ಕೇಂದ್ರಗಳನ್ನು ಜೊತೆಗೂಡಿಸಿ ಅನುದಾನ ನೀಡಲಾರಂಭಿಸಿತ್ತು. ಕೋವಿಡ್ ಸೋಂಕು ಭಾರತವನ್ನು ಪ್ರವೇಶಿಸಿ ಹಾಹಾಕಾರ ಸೃಷ್ಟಿಸಿದ ನಂತರ ಅನುದಾನವನ್ನು ನಿಲ್ಲಿಸಲಾಗಿದೆ.

ಆದರೆ ಶಕ್ತಿಧಾಮ ಡಾ ರಾಜ್ ಅವರ ಕನಸಾಗಿರುವುದರಿಂದ ಅದರಲ್ಲಿರುವ ಮಹಿಳೆಯರಿಗೆ, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಪುನೀತ್ ನೋಡಿಕೊಳ್ಳುತಿದ್ದರು. ಶಿವಣ್ಣನವರ ಪತ್ನಿ ಗೀತಾ ಶಿವರಾಜಕುಮಾರ ಅವರು ಪಾರ್ವತಮ್ಮನವರ ಬಳಿಕ ಆಶ್ರಮದ ಅಧ್ಯಕ್ಷೆಯಾಗಿದ್ದಾರೆ.

ಶಕ್ತಿಧಾಮಕ್ಕೆ ಭೇಟಿ ನೀಡಿ ಇಲ್ಲಿರುವ ಮಕ್ಕಳೊಂದಿಗೆ ಸಮಯ ಕಳೆಯಲು ಹಾಗೂ ಅವರ ಜೊತೆ ಕೂತು ಊಟಮಾಡಲು ಅಪ್ಪು ಇಲ್ಲಿಗೆ ಬರುತ್ತಿದ್ದರಂತೆ. ಮೈಸೂರರಿನ ಪ್ರಸಿದ್ಧ ಹೋಟೆಲ್ಗಳಿಂದ ಊಟ ತರಿಸಿ ಅವರಿಗೆ ಬಡಿಸಿ ತಾವೂ ಅವರೊಂದಿಗೆ ಊಟ ಮಾಡುತ್ತಿದ್ದರು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಡಲು ಸಿಗುತ್ತಿದ್ದ ಸಂಭಾವನೆಯನ್ನು ಪುನೀತ್ ಆಶ್ರಮಕ್ಕೆ ನೀಡುತ್ತಿದ್ದರು.

ಅವರ ಸಾವಿನ ಸುದ್ದಿ ಕೇಳಿ ದಿಗ್ಭ್ರಾಂತರಾಗಿರುವ ಮಕ್ಕಳು ಶನಿವಾರ ಶ್ರದ್ಧಾಂಜಲಿ ಅರ್ಪಿಸಿದರು.

ಇದನ್ನೂ ಓದಿ:  Puneeth Rajkumar: ಪುನೀತ್​ ಹೃದಯಾಘಾತದ ವೈರಲ್​ ವಿಡಿಯೋ ಅಸಲಿಯೋ ನಕಲಿಯೋ? ಇಲ್ಲಿದೆ ಫ್ಯಾಕ್ಟ್​ ಚೆಕ್​