ಶಿರೂರು ಗುಡ್ಡ ಕುಸಿತ: ಗಂಗಾವಳಿ ನದಿಯಲ್ಲಿ ತೇಲಿಬಂತು ಅರ್ಜುನ್ ಟ್ರಕ್​ನಲ್ಲಿದ್ದ ಮರದ ತುಂಡು

|

Updated on: Jul 25, 2024 | 5:54 PM

ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಡ್ಡ ಕುಸಿತಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ನಿನ್ನೆ (ಬುಧವಾರ) ಗಂಗಾವಳಿ ನದಿಯಲ್ಲಿ ಇರುವುದು ತಿಳಿದಿತ್ತು. ಇಂದು(ಜು.25)) ಗಂಗಾವಳಿ ನದಿಯಲ್ಲಿ ಅರ್ಜುನ್ ಟ್ರಕ್​ನಲ್ಲಿದ್ದ ಅಕೇಶಿಯ ಮರದ ತುಂಡೊಂದು ಪತ್ತೆಯಾಗಿದೆ. ಈ ಮೂಲಕ ಲಾರಿ ನದಿಯಲ್ಲಿಯೇ ಇರುವುದು ಖಚಿತವಾಗಿದೆ.

ಉತ್ತರ ಕನ್ನಡ, ಜು.25: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಡ್ಡ ಕುಸಿತಕ್ಕೆ ಸಂಬಂಧಿಸಿದಂತೆ ನಿನ್ನೆ (ಬುಧವಾರ) ಗಂಗಾವಳಿ ನದಿಯಲ್ಲಿ ಬೂಮ್ ಫೋಕ್ಲೇನ್ ಮೂಲಕ ಕಾರ್ಯಾಚರಣೆ ನಡೆಸಿದ್ದ ವೇಳೆ ಫೋಕ್ಲೇನ್ ಬಕೆಟ್​ಗೆ ಕಬ್ಬಿಣ ಬಡಿದಿತ್ತು. ಈ ಹಿನ್ನಲೆ ನದಿಯಲ್ಲಿ ವಾಹನ ಇದೆ ಎನ್ನಲಾಗಿತ್ತು. ಇಂದು(ಜು.25)) ಗಂಗಾವಳಿ ನದಿಯಲ್ಲಿ ಅರ್ಜುನ್ ಟ್ರಕ್​ನಲ್ಲಿದ್ದ ಅಕೇಶಿಯ ಮರದ ತುಂಡೊಂದು ಪತ್ತೆಯಾಗಿದೆ. ಈ ಮೂಲಕ ಲಾರಿ ನದಿಯಲ್ಲಿಯೇ ಇರುವುದು ಖಚಿತವಾಗಿದೆ.

12 ಕಿಲೋಮೀಟರ್ ದೂರದಲ್ಲಿ ದೊರೆತ ಟ್ರಕ್​ನಲ್ಲಿದ್ದ ಅಕೇಶಿಯ ತುಂಡು

ಶಿರೂರಿನ ಗಂಗಾವಳಿ ನದಿಯಲ್ಲಿ ತೇಲಿ ಬಂದು 12 ಕಿಲೋಮೀಟರ್ ದೂರದಲ್ಲಿ ಟ್ರಕ್​ನಲ್ಲಿದ್ದ ಅಕೇಶಿಯ ತುಂಡು ದೊರೆತಿದೆ. ನದಿ ನೀರಿನಲ್ಲಿ ತೇಲಿಬಂದ ಅಕೇಶಿಯ ತುಂಡನ್ನ ಗಂಗಾವಳಿ ನದಿ ತೀರ ಪ್ರದೇಶದ ಜನ, ತೆಗೆದುಕೊಂಡು ಮನೆಗೆ ಕೊಂಡೊಯ್ದಿದ್ದರು. ತೇಲಿಬಂದ ಅಕೇಶಿಯ ತುಂಡಲ್ಲಿ ಅರಣ್ಯ ಇಲಾಖೆಯ ಮಾರ್ಕ್​ ಇರುವುದರಿಂದ ಸ್ಥಳಕ್ಕೆ ಕಾಣೆಯಾದ ಟ್ರಕ್ ಚಾಲಕ ಅರ್ಜುನ್ ಕಡೆಯ ಟ್ರಕ್ ಮಾಲೀಕರು ತೆರಳಿ ದೃಢಪಡಿಸಿದ್ದಾರೆ.

ಲಾರಿ ರೀತಿಯ ವಸ್ತು ಇದೆ ಎಂದು ಖಚಿತಪಡಿಸಿದ ಡ್ರೋನ್

ಇನ್ನು ಬೆಳಗ್ಗೆಯಿಂದ ಕೇರಳ ಮೂಲದ ಮೇಜರ್ ಜನರಲ್ ಇಂದ್ರಬಾಲನ್ ನೇತೃತ್ವದಲ್ಲಿ ನಿರಂತರವಾಗಿ ಡ್ರೋನ್ ಮೂಲಕ ಕಾರ್ಯಾಚರಣೆ ಮಾಡಲಾಗಿತ್ತು. ಇದೀಗ ಇಂದಿನ ಡ್ರೋನ್ ಕಾರ್ಯಾಚರಣೆ ಮುಕ್ತಾಯವಾಗಿದ್ದು,  ನಿನ್ನೆ ನೌಕಾ ದಳ, ಸೇನೆ ಮಾಹಿತಿ ನೀಡಿದಂತೆ ನದಿಯಲ್ಲಿ ಲಾರಿ ರೀತಿಯ ವಸ್ತು ಇದೆ ಎಂದು ಡ್ರೋನ್ ಖಚಿತಪಡಿಸಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on