ಮಾಜಿ ಪ್ರಧಾನ ಮಂತ್ರಿ ಮತ್ತು ಜೆಡಿ(ಎಸ್) ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡ ಅವರು ದೇಶದ ಮತ್ತು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವತ್ತೂ ಬಹಳ ಗಂಭೀರವಾಗಿ ಮಾತಾಡುತ್ತಾರೆ. ತಮಿಳುನಾಡು ಸರ್ಕಾರ ಎತ್ತಿರುವ ತಕರಾರಿನಿಂದಾಗಿ ನೆನೆಗುದಿಗೆ ಬಿದ್ದಿರುವ ಮೇಕೆದಾಟು ಯೋಜನೆ ಬಗ್ಗೆ ಸರ್ಕಾರ ಮತ್ತು ವಿರೋಧ ಪಕ್ಷಗಳು ಮಾತಾಡುತ್ತಲೇ ಇರುತ್ತವೆ. ಆದರೆ, ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಮಾತ್ರ ಯಾವ ಸರ್ಕಾರದಿಂದಲೂ ಸಾಧ್ಯವಾಗುತ್ತಿಲ್ಲ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪಾದಯಾತ್ರೆ ಮಾಡುತ್ತಿರುವ ಬಗ್ಗೆ ಬುಧವಾರದಂದು ದೇವೇಗೌಡ ಅವರನ್ನು ಅವರ ಹುಟ್ಟೂರು ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಮಾಧ್ಯಮದವರು ಕೇಳಿದಾಗ ಮಾರ್ಮಿಕ ಉತ್ತರಗಳನ್ನು ನೀಡಿದರು.
ಶಿವಕುಮಾರ ಅವರು ಪಾದಯಾತ್ರೆ ಮಾಡುತ್ತಿರುವುದಕ್ಕೆ ತಮ್ಮ ಅಭ್ಯಂತರವೇನೂ ಇಲ್ಲ, ಅದನ್ನು ಮಾಡುವುದರಿಂದ ಸಮಸ್ಯೆ ಬಗೆಹರಿಯವ ಹಾಗಿದ್ದರೆ ಅದರ ಬಗ್ಗೆ ಮಾತಾಡುವುದು ತಪ್ಪಾಗುತ್ತದೆ. ಮಾತಾಡಲು ತಮ್ಮಲ್ಲಿ ಸಾಕಷ್ಟು ಸರಕಿದೆ, ಅದರೆ ಈ ಸಂದರ್ಭದಲ್ಲಿ ಮಾತಾಡುವುದು ತನಗಿಷ್ಟವಿಲ್ಲ ಎಂದು ದೇವೇಗೌಡರು ಹೇಳಿದರು.
ಹಿಂದೆ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಶಿವಕುಮಾರ ಅವರು ನೀರಾವರಿ ಸಚಿವರಾಗಿದ್ದರು. ಆಗ ಏನೂ ಮಾಡದೆ ಈಗ ಪಾದಯಾತ್ರೆ ಅಂತ ಹೊರಟಿದ್ದಾರೆ. ಆಗ ಮಾಡಿದ್ದರೆ ಎಲ್ಲ ಶ್ರೇಯಸ್ಸು ಜೆಡಿ(ಎಸ್) ಪಕ್ಷದ ಪಾಲಾಗುತ್ತದೆ ಎಂದ ಭೀತಿಯಿಂದ ಅವರು ಸುಮ್ಮನಿದ್ದರೆ? ಎಂದು ದೇವೇಗೌಡರು ಕೇಳಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 5 ವರ್ಷ ಅಧಿಕಾರ ನಡೆಸಿದಾಗಲೂ ಅವರಾಗಲೀ, ಶಿವಕುಮಾರ್ ಆಗಲೀ ಮೇಕೆದಾಟು ಯೋಜನೆ ಬಗ್ಗೆ ಮಾತಾಡದೆ ಸುಮ್ಮನಿದ್ದರು. ಅದಕ್ಕೆ ಅವರಲ್ಲಿ ಉತ್ತರವಿದೆಯಾ? ಎಂದು ಹೇಳಿದ ದೇವೇಗೌಡರು ತಾವು ಯಾರ ಬಗ್ಗೆಯೂ ಹಗುರವಾಗಿ ಮಾತಾಡಲು ಇಚ್ಛಿಸುವುದಿಲ್ಲ, ಸಮಸ್ಯೆ ಬಗೆ ಹರಿದರೆ ಸಾಕು ಎಂದರು.
ಇದನ್ನೂ ಓದಿ: Salman Khan: ಐಷಾರಾಮಿ ಕಾರು ಬಿಟ್ಟು ಆಟೋ ಓಡಿಸಿದ ಸಲ್ಮಾನ್ ಖಾನ್; ಇಲ್ಲಿದೆ ವಿಡಿಯೋ