ನಾನು ಬರೋವರೆಗೆ ಮಾತ್ರ ನನ್ನ ಚೇರಲ್ಲಿ ಕೂತುಕೊಳ್ಳಬಹುದು ಅಂತ ಕಾರ್ಯಕರ್ತನಿಗೆ ಸಿದ್ದರಾಮಯ್ಯ ಹೇಳಿದರು!

ನಾನು ಬರೋವರೆಗೆ ಮಾತ್ರ ನನ್ನ ಚೇರಲ್ಲಿ ಕೂತುಕೊಳ್ಳಬಹುದು ಅಂತ ಕಾರ್ಯಕರ್ತನಿಗೆ ಸಿದ್ದರಾಮಯ್ಯ ಹೇಳಿದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 20, 2022 | 4:08 PM

ಆ ವ್ಯಕ್ತಿ ಖಾಲಿಯಿದ್ದ ಚೇರಿನ ಕಡೆ ಹೋಗುವಾಗ ಸಿದ್ದರಾಮಯ್ಯ ಒಂದು ಎಚ್ಚರಿಕೆಯನ್ನೂ ನೀಡುತ್ತಾರೆ. ನಾನು ಬರೋವರೆಗೆ ಮಾತ್ರ ಆ ಚೇರ್​ನಲ್ಲಿ ಕುಳಿತುಕೊಳ್ಳಬಹುದು! ಅವರ ಈ ಮಾತಿಗೆ ಜನ ಜೋರಾಗಿ ನಗತೊಡಗಿದರು.

ಮೈಸೂರು: ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಭಾಗವಹಿಸುವ ಸಮಾರಂಭಗಳಲ್ಲಿ ಸ್ವಾರಸ್ಯಕರ ಮಾತುಗಳಿಗೇನೂ ಕೊರತೆ ಇರೋದಿಲ್ಲ. ತಮ್ಮ ಎದುರಾಳಿಗೆ ಮಾತಿನ ಚಾಟಿ ಬೀಸುವುದರಲ್ಲಿ ಅವರು ನಿಷ್ಣಾತರು. ಹಾಗೆಯೇ, ಸಭಿಕರ ಮೇಲೂ ಅವರು ಜೋಕ್ಸ್ ಕಟ್ ಮಾಡುತ್ತಿರುತ್ತಾರೆ. ಅದ್ಯಾವುದೂ ಇಲ್ಲ ಅಂತಾದರೆ ವೇದಿಕೆ ಮೇಲೆ ಕೂತವರಿಗೆ ಕನ್ನಡ ವ್ಯಾಕರಣದ (Kannada grammar) ಪಾಠ ಮಾಡುತ್ತಿರುತ್ತಾರೆ. ಗೇಲಿ ಮಾಡುವ ಭರದಲ್ಲಿ ಅವರು ತಮ್ಮ ಎದುರಾಳಿಗಳ ವಿರುದ್ಧ ಹಗುರವಾಗೇನೂ ಮಾತಾಡುವುದಿಲ್ಲ. ಉತ್ತಮ ಪದಗಳನ್ನು ಬಳಸಿಯೇ ಚಾಟಿ ಬೀಸುತ್ತಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ (corruption) ವಿರುದ್ಧ ಬುಧವಾರ ಮೈಸೂರಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಾಗವಹಿಸಿದ್ದ ಸಿದ್ದರಾಮಯ್ಯನವರು, ಭಾಷಣ ಅರಂಭಿಸುವ ಮೊದಲೇ ಜನ ಗೊಳ್ಳೆಂದು ನಗುವಂತೆ ಮಾಡಿದರು.

ಸಿದ್ದರಾಮಯ್ಯ ಭಾಷಣ ಮಾಡಲು ಬಂದಾಗ ಮೈಕ್ ಸೆಟ್ ನಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿತ್ತು. ಅವರ ಮಾತು ಕೇಳಲು ಕಾತುರರಾಗಿದ್ದ ಜನಕ್ಕೆ ಈ ಅಡಚಣೆ ಕಿರಿಕಿರಿ ಉಂಟು ಮಾಡಿದ್ದು ನಿಜ. ಜನ ವೇದಿಕೆಯ ಸಮೀಪಕ್ಕೆ ಹೋಗುವ ಪ್ರಯತ್ನದಲ್ಲೂ ಇದ್ದರು. ಆದರೆ ಮುಂಭಾಗದಲ್ಲಿ ಚೇರ್ ಗಳೆಲ್ಲ ಭರ್ತಿಯಾಗಿದ್ದವು.

ಆದರೆ, ಸಿದ್ದರಾಮಯ್ಯ ವೇದಿಕೆ ಹತ್ತುವ ಮೊದಲು ಅವರು ಕುಳಿತಿದ್ದ ಸೀಟು ಮಾತ್ರ ಖಾಲಿಯಿತ್ತು. ಆದರೆ ಅದರಲ್ಲಿ ಹೇಗೆ ಕೂರಲು ಸಾಧ್ಯ? ಸಿದ್ದರಾಮಯ್ಯ ಆಡಿದ ಮಾತಿನ ಧಾಟಿ ಕೇಳಿಸಿಕೊಂಡರೆ ಎಲ್ಲರಿಗೂ ಚೇರ್ ಸಿಕ್ಕಿತ್ತು, ಒಬ್ಬನಿಗೆ ಮಾತ್ರ ಇಲ್ಲ. ಆಗಲೇ ಅವರು ಆ ವ್ಯಕ್ತಿಗೆ ‘ನನ್ನ ಚೇರ್ ಮೇಲೆ ಕೂರು’ ಎಂದು ಹೇಳುತ್ತಾರೆ.

ಆ ವ್ಯಕ್ತಿ ಖಾಲಿಯಿದ್ದ ಚೇರಿನ ಕಡೆ ಹೋಗುವಾಗ ಅವರು ಒಂದು ಎಚ್ಚರಿಕೆಯನ್ನೂ ನೀಡುತ್ತಾರೆ. ನಾನು ಬರೋವರೆಗೆ ಮಾತ್ರ ಆ ಚೇರ್​ನಲ್ಲಿ ಕುಳಿತುಕೊಳ್ಳಬಹುದು! ಅವರ ಈ ಮಾತಿಗೆ ಜನ ಜೋರಾಗಿ ನಗತೊಡಗಿದರು. ಚೇರು ಯಾವುದಾದರೇನು ಸಿದ್ದರಾಮಯ್ಯ ಅದನ್ನು ಶಾಶ್ವತವಾಗಿ ಯಾರಿಗೂ ಬಿಟ್ಟುಕೊಡಲಾರರು ಮಾರಾಯ್ರೇ!

ಇದನ್ನೂ ಓದಿ:    ಈಶ್ವರಪ್ಪನವರನ್ನು ಬಂಧಿಸಬೇಕಿತ್ತು ಅಲ್ವೇನ್ರೀ ಅಂತ ಪೊಲೀಸರನ್ನೇ ಕೇಳಿದರು ಸಿದ್ದರಾಮಯ್ಯ!