ಸಿದ್ದರಾಮಯ್ಯನವರ ಹುಟ್ಟೂರಿನಲ್ಲಿ ಸ್ವಾಗತಕ್ಕೆ ಬಂದಿದ್ದು ಅನೇಕ ಜನ ಆದರೆ ಮಾಸ್ಕ್ ಧರಿಸಿದ್ದು ಕೆಲವೇ ಜನ!
ಮಾಸ್ಕ್ ಧರಿಸದೆ ಬಂದಿರುವವರು ಮನೆಗೆ ಹೋಗಿ ಅಂತ ಸಿದ್ದರಾಮಯ್ಯ ಹೇಳಿದ್ದರೆ ಅಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಉಳಿದುಬಿಡುತ್ತಿದ್ದರು!
ಮಾಜಿ ಮುಖ್ಯಮಂತ್ರಿ ಮತ್ತು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯದ ಜನಪ್ರಿಯ ರಾಜಕೀಯ ನಾಯಕರಲ್ಲಿ ಒಬ್ಬರು. ಅವರು ಹೋದಲೆಲ್ಲ ಭಾರಿ ಸಂಖ್ಯೆಯಲ್ಲಿ ಜನ ನೆರೆಯುತ್ತಾರೆ. ಅವರ ಮಾತಿಗೆ ಚಪ್ಪಾಳೆ ತಟ್ಟುತ್ತಾರೆ ಮತ್ತು ಶಿಳ್ಳೆ ಹಾಕುತ್ತಾರೆ. ಅತಿಯಾದ ಅಭಿಮಾನ ಇಟ್ಟುಕೊಂಡವರು ‘ಹೌದು ಹುಲಿಯಾ!’ ಅಂತ ಕೂಗುತ್ತಾರೆ. ಇನ್ನು ಅವರು ತಮ್ಮ ಹುಟ್ಟೂರಿಗೆ ಹೋದರೆ ಕೇಳಬೇಕೇ? ಊರಿಗೆ ಊರೇ ಅವರ ಸ್ವಾಗತಕ್ಕೆ ಹರಿದು ಬರುತ್ತದೆ. ಶನಿವಾರ ಆಗಿದ್ದು ಅದೇ. ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಹಿನ್ನೆಲೆಯಲ್ಲಿ ಹುಟ್ಟೂರು ಮೈಸೂರು ತಾಲ್ಲೂಕಿನ ಸಿದ್ದರಾಮನ ಹುಂಡಿ ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯನವರಿಗೆ ಭರ್ಜರಿ ಸ್ವಾಗತ ಸಿಕ್ಕಿತು. ಗ್ರಾಮದ ಜನರೆಲ್ಲ ಊರ ಹೆಬ್ಬಾಗಿಲಿನ ಬಳಿ ನೆರೆದು ಅವರನ್ನು ಬರಮಾಡಿಕೊಂಡರು.
ಜನರಲ್ಲಿ ಉತ್ಸಾಹವೋ ಉತ್ಸಾಹ. ಸಿದ್ದರಾಮಯ್ಯನವರ ಕಾಲಿಗೆ ಮುಟ್ಟಿ ನಮಸ್ಕರಿಸುವವರು ಕೆಲವರಾದರೆ, ಅವರ ತಲೆ ಮೇಲೆ ಗಾಂಧಿ ಟೋಪಿ ಇಟ್ಟು ಗೌರವಿಸುವವರು ಕೆಲವರು. ಸ್ಥಳದಲ್ಲಿ ಸಾಕಷ್ಟು ಮಹಿಳೆಯರು ಸಹ ಸೇರಿದ್ದರು.
ಊರಿನ ಒಳಭಾಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯನವರನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ಎತ್ತಿನ ಬಂಡಿ ಜಾಲಿ ರೈಡನ್ನು ಮಾಜಿ ಮುಖ್ಯಮಂತ್ರಿಗಳು ತುಂಬಾನೇ ಎಂಜಾಯ್ ಮಾಡುತ್ತಿರುವಂತಿತ್ತು.
ಎತ್ತಿನ ಗಾಡಿಯಲ್ಲಿ ಅವರೊಂದಿಗೆ ಸುಪುತ್ರ ಮತ್ತು ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಹಾಗೂ ಮೈಸೂರು ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ ಜೆ ವಿಜಯಕುಮಾರ್ ಇದ್ದರು.
ರಸ್ತೆಯುದ್ದಕ್ಕೂ ಜನ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಜಯಘೋಷ ಮಾಡುತ್ತಿದ್ದರು. ಅದರೆ, ಗಮನಿಸಬೇಕಾದ ಸಂಗತಿಯೇನೆಂದರೆ, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅನೇಕರು ಮಾಸ್ಕ್ ಧರಿಸಿರಲಿಲ್ಲ. ಸಿದ್ದರಾಮಯ್ಯನವರು ಮಾಸ್ಕ್ ಧರಿಸಿಯೇ ತಮ್ಮ ಸ್ವಾಗತಕ್ಕೆ ಬರಬೇಕೆಂದು ತಮ್ಮೂರಿನ ಜನರಿಗೆ ತಾಕೀತು ಮಾಡಬಹುದಿತ್ತು. ಡಾ ಯತೀಂದ್ರ ಹಿಂದೆ ವೈದ್ಯಕೀಯ ವೃತ್ತಿಯಲ್ಲಿದ್ದವರು, ಕನಿಷ್ಠ ಅವರಾದರೂ ಜನರಿಗೆ ಹೇಳಬಹುದಿತ್ತು.
ಮಾಸ್ಕ್ ಧರಿಸದೆ ಬಂದಿರುವವರು ಮನೆಗೆ ಹೋಗಿ ಅಂತ ಸಿದ್ದರಾಮಯ್ಯ ಹೇಳಿದ್ದರೆ ಅಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಉಳಿದುಬಿಡುತ್ತಿದ್ದರು!
ಇದನ್ನೂ ಓದಿ: Viral Video: ಕೋಪಗೊಂಡ ಮಗನನ್ನು ಸಂತೈಸಿದ ತಾಯಿ; ನೆಟ್ಟಿಗರು ಮೆಚ್ಚಿಕೊಂಡ ಹೃದಯಸ್ಪರ್ಶಿ ವಿಡಿಯೋ ನೋಡಿ