ಮುಂಬೈನಲ್ಲೊಬ್ಬ ಬಿಲ್ಲಿ ಬೌಡನ್, ಈತನ ಅಂಪೈರಿಂಗ್ ಶೈಲಿಗೆ ಫಿದಾ ಆದರು ಸಹಸ್ರಾರು ನೆಟ್ಟಿಗರು!
ಸ್ಕೋರರ್ಗೆ ತಾನು ಮಾಡಿದ ಸಿಗ್ನಲ್ ಅರ್ಥವಾಯಿತೋ ಇಲ್ಲವೋ ಎಂಬ ಗೊಂದಲವೂ ದೀಪಕ್ ಅವರಲ್ಲಿದೆ. ಹಾಗಾಗಿ, ತನ್ನ ನಾರ್ಮಲ್ ಪೋಸ್ಚರ್ಗೆ ಬಂದು ಸಾಂಪ್ರದಾಯಿಕ ಶೈಲಿಯಲ್ಲಿ ತನ್ನೆರಡು ಕೈಗಳನ್ನು ಅಗಲಕ್ಕೆ ಚಾಚಿ ಸಿಗ್ನಲ್ ತೋರುತ್ತಾರೆ.
ನೀವೇನೇ ಹೇಳಿ, ಕ್ರಿಕೆಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡೋದು ಸುಲಭವಲ್ಲ ಕಣ್ರೀ. ದಿನವಿಡೀ ನಿಂತಲ್ಲೇ ನಿಲ್ಲಬೇಕು, ಬೌಲರ್ ಎಸಗುವ ಪ್ರಮಾದಗಳನ್ನು ಎಡಬಿಡದೆ ಗಮನಿಸಬೇಕು, ಆಟ ಸುಸೂತ್ರವವಾಗಿ ನಡೆಯುವಂತೆ ನೋಡಿಕೊಳ್ಳಬೇಕು, ಕರಾರುವಕ್ಕಾದ ನಿರ್ಣಯಗಳನ್ನು ನೀಡಬೇಕು-ಅಂಪೈರ್ ಬದುಕು ನಿಕೃಷ್ಟ ಮಾರಾಯ್ರೇ! ಆದರೆ, ಕೆಲ ಅಂಪೈರ್ಗಳು ‘ಜರಾ ಹಟ್ಕೆ’ ಕಾರ್ಯ ನಿರ್ವಹಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿ. ಮುಂಬೈನಲ್ಲಿ ನಡೆದ ಲೋಕಲ್ ಟೂರ್ನಮೆಂಟೊಂದರ ವಿಡಿಯೋ ಕ್ಲಿಪ್ಪಿಂಗ್ ನಮಗೆ ಸಿಕ್ಕಿದೆ.
ಒಬ್ಬ ವೇಗದ ಬೌಲರ್ ಓಡುತ್ತಾ ಬಂದು ವೈಡ್ ಬಾಲ್ ಎಸೆಯುತ್ತಾನೆ. ಸರಿ, ಅಂಪೈರ್ ಅದನ್ನು ಸಿಗ್ನಲ್ ಮೂಲಕ ತೋರಿಸಬೇಕಲ್ಲ? ಇಲ್ಲಿ ನಿಮಗೆ ಕಾಣುತ್ತಿರುವ ಅಂಪೈರ್ ಹೆಸರು ದೀಪಕ್ ನಾಯ್ಕರ್ನವರೆ ಅಂತೆ, ಅವರು ವೈಡ್ ಬಾಲ್ ಸಿಗ್ನಲ್ ಮಾಡುತ್ತಿರುವ ರೀತಿ ನೋಡಿ! ತಲೆ ಕೆಳಗೆ ಮಾಡಿ ಎರಡು ಕಾಲುಗಳನ್ನು ಅಗಲಕ್ಕೆ ಚಾಚಿ ವೈಡ್ ಬಾಲ್ ಸೂಚನೆ ನೀಡುತ್ತಿದ್ದಾರೆ!!
ಅದು ಸ್ಕೋರರ್ ಗೆ ಅರ್ಥವಾಯಿತೋ ಇಲ್ಲವೋ ಎಂಬ ಗೊಂದಲವೂ ದೀಪಕ್ ಅವರಲ್ಲಿದೆ. ಹಾಗಾಗಿ, ತನ್ನ ನಾರ್ಮಲ್ ಪೋಸ್ಚರ್ಗೆ ಬಂದು ಸಾಂಪ್ರದಾಯಿಕ ಶೈಲಿಯಲ್ಲಿ ತನ್ನೆರಡು ಕೈಗಳನ್ನು ಅಗಲಕ್ಕೆ ಚಾಚಿ ಸಿಗ್ನಲ್ ತೋರುತ್ತಾರೆ. ಜನ ಅವರ ಅಂಪೈರಿಂಗ್ ಶೈಲಿ ಕಂಡು ಖುಷಿಪಟ್ಟಿರುತ್ತಾರೆ ಮನರಂಜನೆ ಪಡೆದುಕೊಂಡಿರುತ್ತಾರೆ.
ಕ್ರಿಕೆಟ್ ಮೈದಾನಗಳಲ್ಲಿ ಅಂಪೈರಿಂಗ್ನ ಏಕತಾನತೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದು ಅಂದರೆ ಅದು ನಿಸ್ಸಂದೇಹವಾಗಿ ನ್ಯೂಜಿಲೆಂಡ್ ಬಿಲ್ಲಿ ಬೌಡನ್. ಅವರು ಮಾಡುವ ಸಿಗ್ನಲ್ಗಳು ಚೇತೇಶ್ವರ ಪೂಜಾರಾ ಕ್ರೀಸಿನಲ್ಲಿದ್ದರೂ ಪ್ರೇಕ್ಷಕರಿಗೆ ಮನರಂಜನೆ ಒದಗಿಸುತ್ತವೆ.
ಅಂಪೈರಿಂಗ್ ಒಂದು ಬಹಳ ಗಂಭೀರವಾದ ಕೆಲಸ ಎಂಬ ಮೊನಾಟನಿಯನ್ನು ಕಳಚಿದ ಶ್ರೇಯಸ್ಸು ಬೌಡನ್ಗೆ ಸಲ್ಲುತ್ತದೆ.