ಬೊಮ್ಮಾಯಿ ಮತ್ತು ಯಡಿಯೂರಪ್ಪ ಜೊತೆಯಾಗಿ ಹೋದರು ದೇವಸ್ಥಾನಕ್ಕೆ, ಪರಿಷತ್ ಚುನಾವಣೆ ಫಲಿತಾಂಶದ ಆತಂಕವೇ?

ಬೊಮ್ಮಾಯಿ ಮತ್ತು ಯಡಿಯೂರಪ್ಪ ಜೊತೆಯಾಗಿ ಹೋದರು ದೇವಸ್ಥಾನಕ್ಕೆ, ಪರಿಷತ್ ಚುನಾವಣೆ ಫಲಿತಾಂಶದ ಆತಂಕವೇ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 12, 2021 | 12:48 AM

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರೂ ಅವರ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ಶನಿವಾರ ದೇವಸ್ಥಾನದ ಹತ್ತಿರ ನೆರೆದಿದ್ದ ಜನ ಅವರಿಗೆ ಜಯಕಾರ ಹಾಕುತ್ತಿದ್ದಿದ್ದು ಕಂಡುಬಂತು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಾಗ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅದರಲ್ಲಿ ವಿಶೇಷವೇನೂ ಇಲ್ಲ. ಅವರಿಬ್ಬರ ನಡುವೆ ಅದ್ಭುತವಾದ ಕೆಮಿಸ್ಟ್ರಿ ಇದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬೊಮ್ಮಾಯಿ ಗೃಹ ಸಚಿವರಾಗಿದ್ದರು. ಪಕ್ಷ ಯಾವುದೇ ಆಗಿರಲಿ, ಅದು ಅಧಿಕಾರಕ್ಕೆ ಬಂದಾಗ ಒಬ್ಬ ತೂಕದ ವ್ಯಕ್ತಿಯನ್ನೇ ಗೃಹ ಸಚಿವನ ಸ್ಥಾನಕ್ಕೆ ಆರಿಸಲಾಗುತ್ತದೆ. ಅದರರ್ಥ ಏನೆಂದರೆ, ಬಿ ಎಸ್ ವೈ ಮುಖ್ಯಮಂತ್ರಿಯಾಗಿದ್ದಾಗಲೂ ಬೊಮ್ಮಾಯಿ ಒಬ್ಬ ವರ್ಚಸ್ಸಿನ, ಖದರಿನ ಮತ್ತು ಪ್ರಭಾವೀ ನಾಯಕರಾಗಿದ್ದರು.

ಇದನ್ನೆಲ್ಲ ಯಾಕೆ ಹೇಳಬೇಕಾಗಿದೆ ಅಂದರೆ, ಯಡಿಯೂರಪ್ಪ ಮತ್ತು ಬೊಮ್ಮಾಯಿ ಶನಿವಾರದಂದು ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಒಂದೇ ಕಾರಲ್ಲಿ ಜೊತೆಯಾಗಿ ಬಂದು ಪೂಜೆ ಸಲ್ಲಿಸಿದರು. ಗಣ್ಯರು ವಿಶೇಷ ಪೂಜೆ ಮಾಡಿಸಿದರೆಂದು ತಿಳಿದುಬಂದಿದೆ. ವಿಶೇಷ ಪೂಜೆ ಯಾವ ಕಾರಣಕ್ಕೆ ಅನ್ನೋದು ಗೊತ್ತಾಗಿಲ್ಲ.

ವಿಧಾನ ಪರಿಷತ್ 25 ಸ್ಥಾನಗಳಿಗೆ ಮತದಾನ ಮುಗಿದಿದೆ ಮತ್ತು ಮತ ಎಣಿಕೆ ಕಾರ್ಯ ಮಂಗಳವಾರ ನಡೆಯಲಿದೆ. ಈ ಚುನಾವಣೆ ಮತ್ತು ಫಲಿತಾಂಶ 2023 ರ ವಿಧಾನ ಸಭಾ ಚುನಾವಣೆಗೆ ದಿಕ್ಸೂಚಿ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಬೊಮ್ಮಾಯಿ ಮತ್ತು ಯಡಿಯೂರಪ್ಪ ಆತಂಕಗೊಂಡು ರಂಗನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರೆ? ಇರಬಹುದು.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರೂ ಅವರ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ಶನಿವಾರ ದೇವಸ್ಥಾನದ ಹತ್ತಿರ ನೆರೆದಿದ್ದ ಜನ ಅವರಿಗೆ ಜಯಕಾರ ಹಾಕುತ್ತಿದ್ದಿದ್ದು ಕಂಡುಬಂತು. ಹಾಗೆಯೇ, ಜನ ಹೂಮಾಲೆಗಳನ್ನು ಸಹ ಅವರಿಗೆ ಮಾತ್ರ ಹಾಕಿದರು. ತಮಗೆ ಯಾರೂ ಹಾರಗಳನ್ನು ಹಾಕಬಾರದು ಅಂತ ಬೊಮ್ಮಾಯಿ ಅವರು ಹೇಳಿರುವುದರಿಂದ ಜನ ಅವರಿಗೆ ಹಾಕಿರಲಾರರು.

ಆದರೆ, ಒಂದು ಮಾತು ಮಾತ್ರ ನಿಜ, ಯಡಿಯೂರಪ್ಪ ಇವತ್ತಿಗೂ ಕರ್ನಾಟಕದ ಅತ್ಯಂತ ಜನಪ್ರಿಯ ಧುರೀಣರಲ್ಲಿ ಒಬ್ಬರು.

ಇದನ್ನೂ ಓದಿ:   Puneeth Rajkumar: ಪುನೀತ್ ಮುಂದಿನ ಚಿತ್ರದ ವಿಡಿಯೋ ತುಣುಕು ರಿಲೀಸ್; ಭಾವುಕರಾದ ಫ್ಯಾನ್ಸ್