Loading video

ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ ಸಿಎಂ-ಡಿಸಿಎಂಗೆ ಹೈಕಮಾಂಡ್ ಖಡಕ್​ ಸೂಚನೆ

Updated on: Jun 10, 2025 | 4:29 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದರು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಜಾತಿ ಗಣತಿ ಮತ್ತು ಇತ್ತೀಚಿನ ಕಾಲ್ತುಳಿತ ದುರಂತದ ಬಗ್ಗೆ ಚರ್ಚಿಸಿದರು. ಸಭೆಯಲ್ಲಿ ಏನೆಲ್ಲ ಚರ್ಚೆಯಾಯಿತು ಎಂಬುವುದನ್ನು ಕೆಸಿ ವೇಣುಗೋಪಾಲ್​ ತಿಳಿಸಿದ್ದಾರೆ.

ನವದೆಹಲಿ, ಜೂನ್​ 10: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ದೆಹಲಿಗೆ ತೆರಳಿದ್ದು, ಕಾಂಗ್ರೆಸ್​ ಹೈಕಮಾಂಡ್​ ನಾಯಕರನ್ನು ಭೇಟಿ ಮಾಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೇಣುಗೋಪಾಲ್ ಮತ್ತು ರಣದೀಪ್​ ಸಿಂಗ್​ ಸುರ್ಜೇವಾಲ ಭಾಗಿಯಾಗಿದ್ದರು. ಸಭೆಯಲ್ಲಿ ಸಿಎಂ ಮತ್ತು ಡಿಸಿಎಂಗೆ ಮಹತ್ವದ ಸೂಚನೆಗಳನ್ನು ಹೈಕಮಾಂಡ್​ ನಾಯಕರು ನೀಡಿದ್ದಾರೆ. ಸಭೆಯಲ್ಲಿ ಏನೆಲ್ಲ ವಿಚಾರಗಳು ಚರ್ಚೆಯಾದವು ಎಂಬುವುದನ್ನು ಕೆಸಿ ವೇಣುಗೋಪಾಲ್​ ತಿಳಿಸಿದ್ದಾರೆ.

ಇತ್ತೀಚಿಗೆ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಅವರು ವಿವರಣೆ ಕೊಟ್ಟಿದ್ದಾರೆ. ಸರ್ಕಾರದ ಕ್ರಮಗಳ ಬಗ್ಗೆಯೂ ಸಿಎಂ ಹಾಗೂ ಡಿಸಿಎಂ ತಿಳಿಸಿದ್ದಾರೆ. ಪ್ರತಿ ಜೀವದ ಬಗ್ಗೆಯೂ ಕಾಂಗ್ರೆಸ್​ಗೆ ಕಾಳಜಿಯಿದೆ. ಘಟನೆ ಸಂಬಂಧ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸಿದೆ. ತನಿಖೆಯಲ್ಲಿ ಪಕ್ಷ ಮೂಗು ತೂರಿಸಲ್ಲ, ಜನಪರ ತನಿಖೆ ನಡೆಯುತ್ತದೆ.

ಜಾತಿ ಜಾತಿಗಣತಿ ಬಗ್ಗೆ ಚರ್ಚೆ ಮಾಡಿದ್ದೇವೆ. ಜೂನ್​ 12 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. ಜಾತಿ ಗಣತಿಯಲ್ಲಿ ಅಂಕಿ-ಸಂಖ್ಯೆಗಳನ್ನು ಸೀಮಿತ ಸಮಯದಲ್ಲಿ ಪುನರ್​ ಪರಿಶೀಲಿಸುವಂತೆ ಸೂಚನೆ ನೀಡಿದ್ದೇವೆ. ಈ ವಿಚಾರಗಳನ್ನು ಬಿಟ್ಟು ಬೇರೆ ಯಾವುದೇ ವಿಚಾರವನ್ನು ಚರ್ಚೆ ಮಾಡಿಲ್ಲ ಎಂದು ಹೇಳಿದರು.

Published on: Jun 10, 2025 03:15 PM