Karnataka Budget Session: ಐದು-ವರ್ಷ ಅವಧಿಗೆ ತಾನೇ ಮುಖ್ಯಮಂತ್ರಿ ಅಂತ ಹೇಳಿ ಸಿದ್ದರಾಮಯ್ಯ ಅಧಿಕಾರ ಹಂಚಿಕೆ ಕಿತ್ತಾಟಕ್ಕೆ ತೆರೆ ಎಳೆದರೇ?
ಸಿದ್ದರಾಮಯ್ಯ ಹೇಳಿದ ಮಾತ್ರಕ್ಕೆ 5-ವರ್ಷ ಮತ್ತು ಮುಂದಿನ ಅವಧಿಗೂ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಅಂತ ನಂಬುವ ಅಗತ್ಯವೇನೂ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ನಿರ್ಣಯವೇ ಅಂತಿಮ ಅಂತ ಎಲ್ಲರಿಗೂ ಗೊತ್ತು. ಅಲ್ಲದೆ ಸಿದ್ದರಾಮಯ್ಯ ಕೂಡ 2028ರಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತೇನೆ ಅಂತ ಹೇಳಿದ್ದಾರೆ. ಆದರೆ ಅವರು ಸದನದಲ್ಲಿ ಹೇಳಿದ್ದು ಕುತೂಹಲವಂತೂ ಮೂಡಿಸಿದೆ.
ಬೆಂಗಳೂರು, ಮಾರ್ಚ್ 12: ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ವಿಧಾನ ಮಂಡಲದಲ್ಲಿ ಮಾತಾಡುವಾಗ ಅಧಿಕಾರ ಹಂಚಿಕೆ ಕಿತ್ತಾಟಕ್ಕೆ ಒನ್ಸ್ ಫಾರ್ ಆಲ್ ತೆರೆ ಎಳೆದರು ಅಂತ ಹೇಳಿದರೆ ಪ್ರಾಯಶಃ ಉತ್ಪ್ರೇಕ್ಷೆ ಅನಿಸದು. ಅವರು ಹೇಳಿದ ಮಾತಿನಲ್ಲಿ ದೃಢತೆ ಮತ್ತು ಸ್ಪಷ್ಟತೆಯನ್ನು ಗುರುತಿಸಬಹುದು. ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವಾಗ ವಿರೋಧ ಪಕ್ಷದ ನಾಯಕ ಆರ್ ಅಶೋಕ (Leader of Opposition R Ashoka), ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯುವ ಬಗ್ಗೆ ಉದ್ದೇಶಪೂರ್ವಕವಾಗಿ ಕಾಲೆಳೆಯುತ್ತಾರೆ. 2018 ರಲ್ಲೂ ಅವರು ಮುಖ್ಯಮಂತ್ರಿಯಾಗಿ ತಾನೇ ಮುಂದುವರಿಯುತ್ತೇನೆ ಎಂದು ಹೇಳಿದ್ದರು, ಅದು ಸುಳ್ಳಾಯಿತು, ಅವರ ಪಕ್ಷ ಅಧಿಕಾರಕ್ಕೂ ಬರಲಿಲ್ಲ ಎಂದು ಹೇಳಿದ ಅಶೋಕ, ಕುಳಿತಿದ್ದ ಸಿದ್ದರಾಮಯ್ಯ ಕಡೆ ತಿರುಗಿ ಐದು ವರ್ಷ ನೀವೇ ಸಿಎಂ ಆಗಿರ್ತೀರಾ? ಅನ್ನುತ್ತಾರೆ.
ಇದನ್ನೂ ಓದಿ: ಶುಭಾಶಯ ತಿಳಿಸಲು ಬಂದ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದ ತೇಜಸ್ವಿ ಸೂರ್ಯ ದಂಪತಿ
ಪ್ರಾಯಶಃ ಇಂಥದೊಂದು ಅವಕಾಶಕ್ಕಾಗಿ ಕಾಯುತ್ತಿದ್ದ ಸಿದ್ದರಾಮಯ್ಯ, ಐದು ವರ್ಷ ಅವಧಿಗೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ, ಮತ್ತು ಅದಾದ ನಂತರದ ಐದು ವರ್ಷದ ಅವಧಿಗೂ ನಾನೇ ಮುಂದುವರಿಯುತ್ತೇನೆ ಎಂದು ನಿರ್ಭಾವುಕಾರಾಗಿ ಹೇಳುತ್ತಾರೆ. ಅವರ ಮಾತುಗಳಿಗೆ ಬಿಜೆಪಿ ಶಾಸಕರು ಸುಮ್ಮನಾಗಿರಬಹುದು, ಅದರೆ ಕಾಂಗ್ರೆಸ್ ಪಾಳೆಯದಲ್ಲಿ ಸಂಚಲನ ಮೂಡಿದೆ. ಹೈಕಮಾಂಡ್ ಸಮಕ್ಷಮ ಡಿಕೆ ಶಿವಕುಮಾರ್ ಅವರೊಂದಿಗೆ ಸಿದ್ದರಾಮಯ್ಯ ಏನು ಒಪ್ಪಂದ ಮಾಡಿಕೊಂಡಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ.
ಅದರೆ ಶಿವಕುಮಾರ್ ಮತ್ತು ಅವರ ಬೆಂಬಲಿಗರು ಎರಡೂವರೆ ವರ್ಷದ ನಂತರ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲಿದ್ದಾರೆ ಅಂತ ಭಾವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇಂದು ಸದನದಲ್ಲಿ ಆಡಿದ ಮಾತು ವಿರೋಧಿ ಕ್ಯಾಂಪಲ್ಲಿ ಗೊಂದಲ ಮತ್ತು ಆತಂಕ ಮೂಡಿಸಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದಾಖಲೆಯ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳೋದನ್ನೊಮ್ಮೆ ಕೇಳಬೇಕು!