ವೈರಲ್ ವಿಡಿಯೋ ಮೂಲ ಪತ್ತೆಗೆ ಮುಂದಾದ ಸೈಬರ್ ಪೊಲೀಸರು: ಮೂರು ಆಯಾಮಗಳಲ್ಲಿ ಸಿದ್ದರಾಮಯ್ಯ ದೂರಿನ ತನಿಖೆ ಶುರು
ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಕುರಿತು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ವಿಡಿಯೋದ ಸತ್ಯಾಸತ್ಯತೆ, ಮೂಲ ಸೃಷ್ಟಿಕರ್ತರು ಹಾಗೂ ತಾಂತ್ರಿಕ ಅಂಶಗಳನ್ನು ಪರಿಶೀಲಿಸಲು ಮೂರು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ವೈರಲ್ ವಿಡಿಯೋಗಳ ಮಾಹಿತಿ ಕೋರಿ ಪೊಲೀಸರು ಯೂಟ್ಯೂಬ್ಗೆ ಪತ್ರ ಬರೆದಿದ್ದಾರೆ. ಯೂಟ್ಯೂಬ್ ಪ್ರತಿಕ್ರಿಯೆ ಬಳಿಕ ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ.
ಬೆಂಗಳೂರು, ಅ.17: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆಸಿರುವುದಾಗಿ ಹೇಳಲಾದ ‘ಸ್ಟಿಂಗ್ ಆಪರೇಷನ್’ ಪ್ರಕರಣದ ತನಿಖೆಯನ್ನು ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು ತೀವ್ರಗೊಳಿಸಿದ್ದಾರೆ. ಸಿದ್ದರಾಮಯ್ಯ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮೂರು ಪ್ರಮುಖ ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದ್ದು, ವಿಡಿಯೋ ಅಪ್ಲೋಡ್ ಮಾಡಿರುವ ಐಡಿಗಳ ಕುರಿತು ಮಾಹಿತಿ ಕೋರಿ ಯೂಟ್ಯೂಬ್ಗೆ ಅಧಿಕೃತ ಇ-ಮೇಲ್ ಪತ್ರ ಬರೆದಿದ್ದಾರೆ. ಸಾಮಾಜಿಕ ಜಾಲತಾಣಗಳು ಹಾಗೂ ಯೂಟ್ಯೂಬ್ನಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ಯಾವ ಯಾವ ಐಡಿಗಳು ಮತ್ತು ಖಾತೆಗಳಿಂದ ಅಪ್ಲೋಡ್ ಮಾಡಲಾಗಿದೆ ಎಂಬ ಸಂಪೂರ್ಣ ವಿವರಗಳನ್ನು ಒದಗಿಸುವಂತೆ ಕೋರಲಾಗಿದೆ. ಸಿದ್ದರಾಮಯ್ಯ ಅವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿರುವ ನಿರ್ದಿಷ್ಟ ಐಡಿಗಳ ಸಮೇತ ಬೆಂಗಳೂರು ನಗರ ಪೊಲೀಸರ ಅಧಿಕೃತ ಇ-ಮೇಲ್ ಐಡಿ ಮೂಲಕ ಯೂಟ್ಯೂಬ್ ಆಡಳಿತ ಮಂಡಳಿಗೆ ಪತ್ರ ಕಳುಹಿಸಲಾಗಿದೆ. ಸೈಬರ್ ಕ್ರೈಂ ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಮೂರು ಪ್ರಮುಖ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಒಂದು ಅಂಥದೊಂದು ಸ್ಟಿಂಗ್ ಆಪರೇಷನ್ ನಿಜಕ್ಕೂ ನಡೆದಿದೆಯಾ? ಅಥವಾ ಇದು ಸಂಪೂರ್ಣವಾಗಿ ಸೃಷ್ಟಿಸಲ್ಪಟ್ಟ ನಕಲಿ ವಿಡಿಯೋವೇ ಎಂಬುದರ ಪರಿಶೀಲನೆ, ಎರಡನೇಯದ್ದು, ವಿಡಿಯೋ ವೈರಲ್ ಮಾಡಿದವರು ಯಾರು? ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ ಹಾಗೂ ಇದರ ಮೂಲ ಸೃಷ್ಟಿಕರ್ತರು ಯಾರು ಎಂಬುದರ ಪತ್ತೆ. ಮೂರನೇಯದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ ನಿಜವಾಗಲೂ ಒರಿಜಿನಲ್ ಹೌದಾ ಅಥವಾ ಎಡಿಟ್ ಮಾಡಲಾಗಿದೆಯೇ ಎಂಬ ತಾಂತ್ರಿಕ ಪರಿಶೀಲನೆ. ಯೂಟ್ಯೂಬ್ನಿಂದ ಅಧಿಕೃತ ಮಾಹಿತಿ ಹಾಗೂ ಉತ್ತರ ಬಂದ ಬಳಿಕ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲು ಮತ್ತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
