ಮುಂಡರಗಿ ಬಳಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಬಿಟ್ಟ ಅಚ್ಚುಕಟ್ಟು ಪ್ರಾಧಿಕಾರ
ಕಳೆದ ಬಾರಿಯ ಮಾನ್ಸೂನ್ ಸೀಸನ್ನಲ್ಲಿ ತುಂಗಭದ್ರಾ ನದಿಯೂ ಸೇರಿದಂತೆ ರಾಜ್ಯದಲ್ಲಿ ಹರಿಯುವ ಎಲ್ಲ ನದಿಗಳ ಒಡಲು ಬರಿದಾಗಿತ್ತು. ಕೊರತೆ ಮಳೆಯಿಂದಾಗಿ ಬೆಳೆಗಳೆಲ್ಲ ನಾಶವಾಗಿ ಭೀಕರ ಬರಗಾಲ ತಲೆದೋರಿತ್ತು. ಬರದ ಸ್ಥಿತಿ ಇನ್ನೂ ರಾಜ್ಯವನ್ನಾವರಿಸಿದೆ. ಆದರೆ ಈ ಬಾರಿ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುತ್ತಿದೆ, ಕರಾವಳಿ ಪ್ರಾಂತ್ಯದಲ್ಲಂತೂ ವಿಪರೀತ ಮಳೆಯಾಗುತ್ತಿದೆ. ರೈತ ಸಮುದಾಯ ಸಂತಸದಿಂದ ಬೀಗುತ್ತಿದೆ.
ಗದಗ: ಈ ಬಾರಿಯ ಮಳೆ ತಾರತಮ್ಯವೆಸಗುತ್ತಿಲ್ಲ. ಅಂದರೆ, ರಾಜ್ಯದ ಕರಾವಳಿ ಪ್ರಾಂತ್ಯ, ದಕ್ಷಿಣ ಕರ್ನಾಟಕದಂತೆ ಉತ್ತರ ಕರ್ನಾಟಕದಲ್ಲೂ ಭರ್ಜರಿಯಾಗಿ ಮಳೆಯಾಗುತ್ತಿದೆ. ತುಂಗಭದ್ರಾ ನದಿ ಪಾತ್ರ ಮತ್ತು ಗದಗ ಜಿಲ್ಲೆಯ ಹಲವಾರು ಭಾಗಗಳಲ್ಲಿ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ ಮತ್ತು ಬರುತ್ತಲೇ ಇದೆ. ನಿಮಗೆ ದೃಶ್ಯಗಳಲ್ಲಿ ಕಾಣುತ್ತಿರುವ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿರುವ ಸಿಂಗಟಾಲೂರ್ ಬ್ಯಾರೇಜ್ ಭರ್ತಿಯಾಗಿ ಬಿಟ್ಟಿದೆ. ಗದಗ ಜಿಲ್ಲೆಯ ನಮ್ಮ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಬ್ಯಾರೇಜ್ ನಲ್ಲಿ 1.94ಟಿಎಂಸಿ ನೀರು ಸಂಗ್ರಹವಾಗಿದೆ. ಹಾಗಾಗಿ, ಬ್ಯಾರೇಜ್ ನಲ್ಲಿ ಸಂಗ್ರಹವಾಗಿದ್ದ ನೀರನ್ನು ತುಂಗಭದ್ರಾ ನದಿಗೆ ಹರಿಬಿಡಲಾಗಿದೆ. ಈ ಬ್ಯಾರೇಜ್ಗಿರುವ 24 ಕ್ರಸ್ಟ್ಗೇಟ್ ಗಳ ಪೈಕಿ 10 ಗೇಟ್ ಗಳನ್ನು ತೆರೆದು 45,000 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಬಿಡಲಾಗಿದೆ. ಬ್ಯಾರೇಜ್ ನಿಂದ ನೀರು ಹರಿಬಿಟ್ಟ ಕಾರಣ ನದಿಯಲ್ಲಿ ಹರಿವು ಹೆಚ್ಚಲಿದ್ದು ನದಿಪಾತ್ರಗಳಲ್ಲಿ ವಾಸವಾವಿರುವ ಜನ ಎಚ್ಚರದಿಂದದಿರಬೇಕೆಂದು ಗದಗ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ನದಿಪಾತ್ರದಲ್ಲಿರುವ ಕೊರ್ಲಹಳ್ಳಿ, ಹೆಸರೂರ, ಮತ್ತು ಇನ್ನೂ ಕೆಲ ಗ್ರಾಮಗಳ ನಿವಾಸಿಗಳಿಗೆ ನದಿಯ ಹತ್ತಿರ ಸುಳಿಯದಂತೆ ಎಚ್ಚರಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬರಗಾಲದ ಪರಿಣಾಮ: ತುಂಗಭದ್ರಾ ನದಿ ಖಾಲಿ, ಹುಲಿಗೆಮ್ಮ ದೇವಸ್ಥಾನಕ್ಕೆ ಬಂದ ಭಕ್ತರಿಂದ ಸ್ನಾನಕ್ಕಾಗಿ ಪರದಾಟ!