ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಮರು ತನಿಖೆ ಬಗ್ಗೆ ವಿಶೇಷ ತನಿಖಾ ತಂಡದಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಎಸ್ಐಟಿ ಮುಖ್ಯಸ್ಥ ಶಶಿಕುಮಾರ್ ಅವರು ಅಧಿಕಾರಿಗಳೊಂದಿಗೆ ಸುಮಾರು 3 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ಹಿಂದಿನ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಸಿಐಡಿ ವರದಿಗಳ ಪರಿಶೀಲನೆ ಹಾಗೂ ಮರುತನಿಖೆ ಎಲ್ಲಿಂದ ಆರಂಭಿಸಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಮಂಗಳೂರು, ಅಕ್ಟೋಬರ್ 13: ಪಾಂಗಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂರ್ ಮರು ತನಿಖೆ ಬಗ್ಗೆ ಮಂಗಳೂರಿನ SIT ಕಚೇರಿಯಲ್ಲಿ ಹೈವೋಲ್ಟೇಜ್ ಸಭೆ ನಡೆದಿದೆ. SIT ಮುಖ್ಯಸ್ಥ ಶಶಿಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಿಬಿಐ ಮತ್ತು ಸಿಐಡಿ ಕೇಸ್ ಫೈಲ್ ಬಗ್ಗೆ ಮಾತುಕತೆ ನಡೆಸಲಾಗಿದೆ. ಸಾಕ್ಷಿಗಳ ಹೇಳಿಕೆ, ವೈದ್ಯಕೀಯ ವರದಿ, ಮರಣೋತ್ತರ ಪರೀಕ್ಷೆ ವರದಿ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಪರಿಶೀಲನೆ ಬಗ್ಗೆ ಚರ್ಚಿಸಲಾಗಿದೆ. ಈ ಹಿಂದೆ ತನಿಖಾಧಿಕಾರಿಗಳು ಯಾವ ಸಾಕ್ಷ್ಯಾಧಾರ ಸಂಗ್ರಹಿಸಿದ್ದರು, ಯಾವುದನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂಬ ಬಗ್ಗೆ ಪರಿಶೀಲನೆ ನಡೆದಿದೆ. ಜೊತೆಗೆ ಹಳೆ ತನಿಖೆಯಲ್ಲಿ ಉಂಟಾಗಿರಬಹುದಾದ ಲೋಪಗಳ ಬಗ್ಗೆಯೂ ಮಾತುಕತೆ ನಡೆದಿದೆ. ಕೋರ್ಟ್ನ ಹಳೆ ತೀರ್ಪು, ಸುಪ್ರೀಂಕೋರ್ಟ್ ನಿರ್ದೇಶನ ಅಧ್ಯಯನ, ತೀರ್ಪಿನಲ್ಲಿ ಉಲ್ಲೇಖಿಸಿರುವ ಸಾಕ್ಷ್ಯಗಳ ಕೊರತೆ, ತನಿಖೆಯಲ್ಲಿ ಲೋಪ ಸಂಬಂಧ ವಿಚಾರಗಳ ಬಗ್ಗೆಯೂ ವಿಶೇಷ ತನಿಖಾ ತಂಡದ ಸಭೆಯಲ್ಲಿ ವಿಸ್ತೃತವಾಗಿ ಸಮಾಲೋಚನೆ ನಡೆಸಲಾಗಿದೆ. ಸೌಜನ್ಯ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರ ಆರಂಭಿಕ ತನಿಖೆಯಿಂದ ಸಿಬಿಐ ತನಿಖೆವರೆಗೆ ವಿಶ್ಲೇಷಣೆಗೆ SIT ಮುಖ್ಯಸ್ಥ ಶಶಿಕುಮಾರ್ ಈ ವೇಳೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
