ರಾಜ್ಯದ ನಾನಾ ಭಾಗಗಳಲ್ಲಿ ಇರುವಂತಹ ದೇಗುಲಗಳು ಸ್ಥಳೀಯವಾಗಿ ಮತ್ತು ರಾಜ್ಯ ವ್ಯಾಪಿಯಲ್ಲಿ ಸಾಕಷ್ಟು ಪ್ರಸಿದ್ಧಿಯನ್ನ ಪಡೆದಿವೆ. ಅಂತಾ ದೇಗುಲಗಳ ವಿಶೇಷತೆಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವ ವಿಶೇಷ ಕಾರ್ಯಕ್ರಮವೆ ಟೆಂಪಲ್ ಟೂರ್. ದಾವಣಗೆರೆ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಸಮೃದ್ಧ ತಾಲೂಕು ಅಂದ್ರೆ ಚನ್ನಗಿರಿ. ಇದಕ್ಕೆ ಇನ್ನೊಂದು ಹೆಸರೇ ಅಡಿಕೆ ನಾಡು ಅಂತಾ. ಚನ್ನಗಿರಿ ತಾಲೂಕಿನಲ್ಲಿರುವ ಒಂದು ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕವಾಡೇಶ್ವರ ದೇವಿ. ಸ್ಥಳೀಯ ಭಾಷೆಯಲ್ಲಿ ಇದಕ್ಕೆ ಅಮ್ಮನಗುಡ್ಡ ಎಂದು ಕರೆಯುತ್ತಾರೆ. ಶಕ್ತಿದೇವತೆಯಾಗಿರುವ ಅಮ್ಮನ ಗುಡ್ಡದ ಕುಕ್ಕಡವಾಡೇಶ್ವರಿ ದರ್ಶನ ಪಡೆದು ಜನರು ತಮ್ಮ ಇಷ್ಟಾರ್ಥ ಸಿದ್ಧಿಗೆ ಹರಕೆ ಕಟ್ಟೋದು ಈ ಸ್ಥಳದ ವಾಡಿಕೆ. ಅಂದುಕೊಂಡ ಕೆಲಸ ಆದರೆ ಮರುವರ್ಷ ಬಂದು ತಾಯಿಯ ಹರಕೆ ತೀರಿಸಿ ಪೂಜೆ ಕೊಟ್ಟು ಹೋಗಬೇಕಾಗಿರುವುದು ಈ ಸ್ಥಳದಲ್ಲಿ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ.