ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಸಂಚಲನ: ರಾಜಕಾರಣಿಗಳಿಗೆ ಕಿವಿಮಾತು ಹೇಳಿದ ಜೋಶಿ
ಮುಖ್ಯಾಂಶಗಳು
- ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆರೋಪ ಪ್ರಕರಣ
- ಸ್ಟಿಂಗ್ ಹಿಂದಿರುವ ಆರೋಪಿಗಳನ್ನ ಎಸ್ಐಟಿ ಬಂಧಿಸಲೇಬೇಕು ಎಂದ ಜೋಶಿ
- ಕಾರವಾರದಲ್ಲಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಕಾರ್ಯಾಚರಣೆಯನ್ನು ಖಂಡಿಸಿದ್ದಾರೆ. ಇಂತಹ ಬೆಳವಣಿಗೆ ಸುಸಂಸ್ಕೃತ ರಾಜಕಾರಣಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದು, ಸ್ಟಿಂಗ್ ಹಿಂದೆ ಇರುವವರನ್ನು ಎಸ್‌ಐಟಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ರಾಜಕಾರಣದಲ್ಲಿ ನೈತಿಕತೆ ಅತಿ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.
ಕಾರವಾರ, ಅಕ್ಟೋಬರ್ 18: ‘ಸಿದ್ದರಾಮಯ್ಯನವರಿಗೆ ಸ್ಟಿಂಗ್ ಆಪರೇಷನ್ ಮಾಡಿ ವಿಡಿಯೋ ತೋರಿಸಿ ಸಿಎಂ ಸ್ಥಾನದಿಂದ ಇಳಿಸಿದ್ದಾರೆ ಎನ್ನುವುದು ಶಾಕಿಂಗ್ ನ್ಯೂಸ್ ಆಗಿದೆ. ಸುಸಂಸ್ಕೃತ ರಾಜಕಾರಣಕ್ಕೆ ಇಂತಹ ಬೆಳವಣಿಗೆ ಒಳ್ಳೆಯದಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆರೋಪ ಪ್ರಕರಣ ವಿಚಾರವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ‘ನನಗೂ ಸಿದ್ದರಾಮಯ್ಯನವರಿಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದೆ. ಆದರೆ ಹಿರಿಯ ನಾಯಕರ ಮೇಲೆ ಸ್ಟಿಂಗ್ ಮಾಡುವಂಥದ್ದು ಒಪ್ಪುವುದಲ್ಲ. ಸ್ಟಿಂಗ್ ಆಪರೇಷನ್ ಆಗಿ ಸಿಕ್ಕಿಕೊಳ್ಳುವವರ ವೀಕ್ನೆಸ್ ಇರಬೇಕಲ್ಲ. ಕರ್ನಾಟಕದಲ್ಲಿ ಸ್ಟಿಂಗ್ ಆಪರೇಷನ್ ರೀತಿ ಬಹಳ ಘಟನೆ ನಡೆದಿದೆ. ರಾಜಕಾರಣಿಗಳು ಸಿಕ್ಕಿಹಾಕಿಕೊಳ್ಳುವುದಕ್ಕೆ ಅನೈತಿಕ ಕೆಲಸ ಮಾಡಬಾರದು. ರಾಜಕಾರಣಿಗಳಾದ ನಮ್ಮನ್ನು ನಾಯಕರನ್ನಾಗಿ ಬಯಸುತ್ತಾರೆ, ಆದರೆ ರಾಜಕಾರಣಿಗಳು ಯಾಕೆ ಇಂತಹ ಪರಿಸ್ಥಿತಿ ತಂದುಕೊಳ್ಳುತ್ತಾರೆ’ ಎಂದು ಕಿವಿಮಾತು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
