ಶಿವಮೊಗ್ಗ: ಬಲೆ ಹಾಕಿ ಬೀದಿ ನಾಯಿಯ ಹಿಡಿದು ಅಮಾನುಷವಾಗಿ ಕೊಲೆ, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಹಂದಿ ಮರಿಯನ್ನು ತಿನ್ನುತ್ತಿದೆ ಎಂದು ಹಂದಿ ಹಿಡಿಯುವ ಯುವಕರ ತಂಡವೊಂದು ಬೀದಿ ನಾಯಿಯನ್ನು ಬಲೆ ಹಾಕಿ ಹಿಡಿದು ಸಾರ್ವಜನಿಕವಾಗಿ ಅಮಾನುಷವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಶಿವಮೊಗ್ಗದ ಗೋಪಾಳ ಪೊಲೀಸ್ ಬಡಾವಣೆಯಲ್ಲಿ ನಡೆದಿದೆ. ಅಮಾನುಷ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶಿವಮೊಗ್ಗ, ಡಿಸೆಂಬರ್ 9: ಹಂದಿ ಹಿಡಿಯಲು ಬಂದ ಯುವಕರ ಗುಂಪು ಬಲೆ ಹಾಕಿ ಬೀದಿ ನಾಯಿಯನ್ನು ಹಿಡಿದು ಕ್ರೂರವಾಗಿ ಬಡಿದು ಕೊಂದ ಘಟನೆ ಶಿವಮೊಗ್ಗದ ಗೋಪಾಳ ಪೊಲೀಸ್ ಬಡಾವಣೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬೀದಿನಾಯಿ ಹಂದಿಮರಿಗಳನ್ನು ಹಿಡಿದು ತಿಂದು ಹಾಕಿದೆ ಎಂದು ಯುವಕರು ಸಿಟ್ಟಿಗೆದ್ದಿದ್ದು, ಬಲೆ ಹಾಕಿ ನಾಯಿಯನ್ನು ಹಿಡಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಇಡೀ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದುಷ್ಕೃತ್ಯದ ವಿರುದ್ಧ ಪ್ರಾಣಿ ರಕ್ಷಣಾ ಸೇವೆ ತಂಡದವರು ತುಂಗಾ ನಗರ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
