ಟ್ರಸ್ಟೀಗಳ ಜಗಳದ ನಡುವೆ ವಿನಾಕಾರಣ ತೊಂದರೆಗೊಳಗಾದರು ವಿದ್ಯಾರ್ಥಿಗಳು, ಮೈಸೂರಲ್ಲೊಂದು ಅನಾಗರಿಕ ಘಟನೆ
ಅವನ ಮೂರ್ಖ ಮತ್ತು ಬಾಲಿಷತನದಿಂದ ಬೇಸತ್ತ ಪಾಲಕರು ಅಂತಿಮವಾಗಿ ಪೊಲೀಸರಿಗೆ ಫೋನ್ ಮಾಡಿ ಅವರನ್ನು ಕರೆಸಿಕೊಂಡಿದ್ದಾರೆ. ಪೊಲೀಸರು ಅವನಿಗೆ ವಿದ್ಯಾರ್ಥಿಗಳನ್ನು ಹೊರಗೆ ಕಳಿಸುವಂತೆ ಹೇಳಿದಾಗಲೂ ಅವನು ಅದೇ ಹುಂಬತನವನ್ನು ಮುಂದುವರಿಸಿದ್ದಾನೆ.
ಮೈಸೂರಿನ ಕಾಲೇಜೊಂದು ತನ್ನ ವಿದ್ಯಾರ್ಥಿಗಳೊಂದಿಗೆ ಅಮಾನವೀಯವಾಗಿ ವರ್ತಿಸಿದೆ. ಕಾಲೇಜಿನ ಟ್ರಸ್ಟಿಗಳ ಅನಾಗರಿಕ ವರ್ತನೆಯಿಂದ ಮೈಸೂರು ಮಾತ್ರವಲ್ಲ ಈ ವಿಡಿಯೋವನ್ನು ನೋಡುವ ನೀವು ಸಹ ದಂಗಾಗುತ್ತೀರಿ. ಆಕೃತಿ ಎಜುಕೇಶನ್ ಟ್ರಸ್ಟ್ ಹೆಸರಲ್ಲಿ ಒಂದೈದು ಜನ-ವನಿತಾ, ಸಲೋನಿ, ರುನಾಲು, ರೇಣುಕಾ ಮತ್ತು ಅಶೋಕ ಕುಮಾರ್ ಎನ್ನುವವರು ಸೇರಿ ರೇಣುಕಾ ಪಿಯು ಕಾಲೇಜು ನಡೆಸುತ್ತಿದ್ದಾರೆ. ಅವರ ನಡುವೆ ಕಾಲೇಜು ಆವರಣ ಲೀಸ್ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಜಗಳ ಶುರುವಿಟ್ಟುಕೊಂಡಿದೆ. ಅವರಲ್ಲಿ ಒಬ್ಬ ಕಮಂಗಿ-ತಲೆಗೆ ಟೋಪಿ, ನೀಲಿ ಜೀನ್ಸ್ ಮೇಲೆ ಕಪ್ಪು ಬಣ್ಣದ ಜರ್ಕಿನ್ ಧರಿಸಿ ಜನರಿಂದ ಮತ್ತು ವಿದ್ಯಾರ್ಥಿಗಳ ಪೋಷಕರರಿಂದ ಒಂದೇಸಮ ಉಗಿಸಿಕೊಳ್ಳುತ್ತಿರುವವನು ಕಾಲೇಜು ಮತ್ತು ಅದರ ಆವರಣದ ಮೇಲೆ ಹಕ್ಕು ಜತಾಯಿಸಲು ಅಲ್ಲಿ ಓದುವ ಮಕ್ಕಳನ್ನು ಒಳಗಡೆ ಹಾಕಿ ಪ್ರವೇಶದ್ವಾರಕ್ಕೆ ಬೀಗ ಜಡಿದಿದ್ದಾನೆ. ವಿದ್ಯಾರ್ಥಿಗಳದ್ದು ಏನೆಂದರೆ ಏನೂ ತಪ್ಪಿಲ್ಲ. ಅವರನ್ನು ಹೊರಗೆ ಕಳಿಸಿ ನಿಮ್ಮ ನಿಮ್ಮ ಜಗಳ ಮುಂದುವರಿಸಿಕೊಳ್ಳಿ ಅಂತ ಅಲ್ಲಿ ನೆರೆದಿರುವ ಜನ ಹೇಳುತ್ತಿದ್ದರೂ ಅವನು ಮೊಂಡುತನ ಪ್ರದರ್ಶಿಸುತ್ತಾ ಜನರೊಂದಿಗೆ ಪಾಲಕರೊಂದಿಗೆ ವಾದ ಮಾಡುತ್ತಿದ್ದಾನೆ.
ಅವನ ಮೂರ್ಖ ಮತ್ತು ಬಾಲಿಷತನದಿಂದ ಬೇಸತ್ತ ಪಾಲಕರು ಅಂತಿಮವಾಗಿ ಪೊಲೀಸರಿಗೆ ಫೋನ್ ಮಾಡಿ ಅವರನ್ನು ಕರೆಸಿಕೊಂಡಿದ್ದಾರೆ. ಪೊಲೀಸರು ಅವನಿಗೆ ವಿದ್ಯಾರ್ಥಿಗಳನ್ನು ಹೊರಗೆ ಕಳಿಸುವಂತೆ ಹೇಳಿದಾಗಲೂ ಅವನು ಅದೇ ಹುಂಬತನವನ್ನು ಮುಂದುವರಿಸಿದ್ದಾನೆ. ಕೊನೆಗೆ ಮಹಿಳೆಯರು ಸುತ್ತಿಗೆಯಿಂದ ಬೀಗ ಮುರಿಯುವ ಪ್ರಯತ್ನ ಮಾಡಿದ್ದಾರೆ.
ಆದರೆ, ಬೀಗ ತೆರೆದುಕೊಂಡಿಲ್ಲ. ಬೀಗ ಒಡೆಯುವವರ ಮೇಲೆ ಪ್ರಕರಣ ದಾಖಲಿಸುವ ಬೆದರಿಕೆಯನ್ನು ಅವನು ಹಾಕಿದ್ದಾನೆ. ಅವನ ಭಾಷೆಯನ್ನು ನೀವು ಕೇಳಿಸಿಕೊಳ್ಳಿ. ಅಂತಿಮವಾಗಿ ಪೊಲೀಸರು ಅವನ ಮನವೊಲಿಸಿ ಬೀಗ ತೆಗೆಸುವಲ್ಲಿ ಸಫಲರಾಗಿದ್ದಾರೆ.
ಡಿಡಿಪಿಯು ಶ್ರೀನಿವಾಸ್ ಮೂರ್ತಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ಬಳಿಕ ವಿಜಯನಗರ ಪೊಲೀಸ್ ಠಾಣೆಯಲ್ಲಿ ಟ್ರಸ್ಟೀಗಳ ವಿರುದ್ಧ ಪ್ರಕರಣವೊಂದನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: 10 ರೂ ಕೊಟ್ಟು ಖರೀದಿಸಿದ್ದ ಕೋಳಿ ಮರಿಗೆ 52 ರೂ ಟಿಕೆಟ್, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್