ಚಿತ್ರದುರ್ಗದಲ್ಲೂ ಜೋರು ಮಳೆ, ಉಕ್ಕಿ ಹರಿವ ಹಳ್ಳದಲ್ಲಿ ಕೊಚ್ಚಿಹೋದವು ಹತ್ತು ಕುರಿಗಳು
ನದಿಯೊಂದರಲ್ಲಿ ಪ್ರವಾಹ ಬಂದಹಾಗೆ ನೀರು ರಭಸದಿಂದ ಹರಿಲಾರಂಭಿಸಿದ್ದರಿಂದ ಕುರಿ ಮೇಯಿಸಲು ಈ ಸ್ಥಳಕ್ಕೆ ಬಂದಿದ್ದ ಕುರಿಗಾಹಿಗಳು ತಮ್ಮ ಕುರಿಗಳೊಂದಿಗೆ ತೊಂದರೆಗೆ ಸಿಲುಕಿದ್ದಾರೆ. ಅವರೇ ಹೇಳಿರುವ ಹಾಗೆ 10 ಕುರಿಗಳು ಉಕ್ಕಿ ಹರಿವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ರಾಜ್ಯದಾದ್ಯಂತ ನಿಲ್ಲದ ಮಳೆಯಿಂದ ಆಗುತ್ತಿರುವ ಅನಾಹುತಗಳಿಗೆ ಕೊನೆ ಇದ್ದಂತಿಲ್ಲ. ಕರ್ನಾಟಕದ ಎಲ್ಲ ಭಾಗಗಳಲ್ಲಿ ಮಳೆ ಸುರಿಯುತ್ತಲೇ ಇದೆ. ನಾವು ಹಿಂದೆ ಚರ್ಚಿಸಿದ ಹಾಗೆ, ಚಳಿಗಾಲ ಆರಂಭಗೊಂಡು ಒಂದೂವರೆ ತಿಂಗಳು ಕಳೆದರೂ ಮಳೆ ಸುರಿಯುವುದು ಮಾತ್ರ ನಿಂತಿಲ್ಲ. ರಾಜಧಾನಿ ಬೆಂಗಳೂರಿನಲ್ಲೂ ಕಳೆದ ಒಂದು ತಿಂಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ನಿಮಗೆ ಒಂದು ವಿಡಿಯೋವನ್ನು ನಾವಿಲ್ಲಿ ತೋರಿಸುತ್ತಿದ್ದೇವೆ. ಇದನ್ನು ಕುರಿಗಾಹಿಯೊಬ್ಬರು ತಮ್ಮ ವಿಡಿಯೋನಲ್ಲಿ ಶೂಟ್ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ದೊಡ್ಡತೇಕಲವಟ್ಟಿ ಗ್ರಾಮದಲ್ಲಿ ಮಳೆ ಸೃಷ್ಟಿಸಿದ ಅವಾಂತರದ ವಿಡಿಯೋ ಇದು.
ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಳೆದ ಬುಧವಾರ ಬೆಳಗ್ಗೆ ಒಂದೇ ಸಮನೇ ಸುರಿಯಲಾರಂಭಿಸಿದ ಮಳೆಗೆ ದೊಡ್ಡತೇಕಲವಟ್ಟಿ ಗ್ರಾಮದಲ್ಲಿನ ಹಳ್ಳವು ಉಕ್ಕಿ ಹರಿಯಲಾರಂಭಿಸಿದೆ. ನದಿಯೊಂದರಲ್ಲಿ ಪ್ರವಾಹ ಬಂದಹಾಗೆ ನೀರು ರಭಸದಿಂದ ಹರಿಲಾರಂಭಿಸಿದ್ದರಿಂದ ಕುರಿ ಮೇಯಿಸಲು ಈ ಸ್ಥಳಕ್ಕೆ ಬಂದಿದ್ದ ಕುರಿಗಾಹಿಗಳು ತಮ್ಮ ಕುರಿಗಳೊಂದಿಗೆ ತೊಂದರೆಗೆ ಸಿಲುಕಿದ್ದಾರೆ. ಅವರೇ ಹೇಳಿರುವ ಹಾಗೆ 10 ಕುರಿಗಳು ಉಕ್ಕಿ ಹರಿವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ನೀರಿನ ಸೆಳೆತಕ್ಕೆ ಸಿಕ್ಕ ಇತರ ಕುರಿಗಳನ್ನು ರಕ್ಷಿಸಲು ಕುರಿಗಾಹಿಗಳು ನೀರಿಗೆ ಇಳಿದಿದ್ದಾರೆ. ಸತ್ತಿರುವ ಎರಡು ಕುರಿಗಳನ್ನು ಅವರು ದಡಕ್ಕೆ ಎಳೆದುಹಾಕುತ್ತಿರುವುದು ನಿಮಗೆ ವಿಡಿಯೋನಲ್ಲಿ ಕಾಣಿಸುತ್ತದೆ. ನೀರಿನ ಸೆಳೆತ ಬಲವಾಗಿದ್ದರೂ ಹಲವಾರು ಕುರಿಗಾಹಿಗಳು ಹಳ್ಳದಲ್ಲಿ ಇಳಿದಿದ್ದು ಪ್ರಶಂಸನೀಯ.
ಹರಿಯುವ ನೀರಿನಲ್ಲಿ ಅಂಡರ್ ಕರೆಂಟ್ ಎಷ್ಟಿದೆ ಅಂತ ಅರ್ಥಮಾಡಿಕೊಳ್ಳಲು ಒಬ್ಬ ಹುಡುಗ ಅಡುವ ಮಾತೇ ಸಾಕು. ನೀರಿನ ರಭಸಕ್ಕೆ ತನ್ನ ನಿಕ್ಕರ್ ಬಿಚ್ಚಿಕೊಂಡು ಹೋಗುತ್ತಿದೆ ಎಂದು ಅವನು ತನ್ನ ಜೊತೆಗಾರರಿಗೆ ಹೇಳುವುದು ಕೇಳಿಸುತ್ತದೆ!!
ಇದನ್ನೂ ಓದಿ: ಚಿಕ್ಕಬಳ್ಳಾಪುರ: ದೇವಸ್ಥಾನದಲ್ಲಿ ನಿಗೂಢ ಸಾವು ಪ್ರಕರಣ; ಸಾಯುವುದಕ್ಕೂ ಮುನ್ನ ಮಾಡಿರುವ ವಿಡಿಯೋ ವೈರಲ್