ನಿಮಗೆ ಗೊತ್ತಾ? ಜಾಗತಿಕ ಸುಂದರಿ ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ತೊಟ್ಟ ಗೌನನ್ನು ವಿನ್ಯಾಸಗೊಳಿಸಿದ್ದು ಒಬ್ಬ ತೃತೀಯ ಲಿಂಗಿ!

Harnaaz Sandhu: ಸೈಶಾ ಈ ವರ್ಷ ಜನೆವರಿಯಲ್ಲಿ ತೃತೀಯ ಲಿಂಗಿಯಾಗಿ ಬದಲಾಗಿದ್ದಾರೆ. ಅವರು ಲಿಂಗ ಪರಿವರ್ತನೆಗೊಳಗಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹೇಳಿಕೊಂಡಿದ್ದರು.

TV9kannada Web Team

| Edited By: shivaprasad.hs

Dec 15, 2021 | 9:04 AM

ಭಾರತದ ಹರ್ನಾಜ್ ಸಂಧು ಸೋಮವಾರದಂದು ಜಾಗತಿಕ ಸುಂದರಿ ಕಿರೀಟ ಧರಿಸಿದ್ದು ಈಗ ಪ್ರತಿ ಭಾರತೀಯನಿಗೆ ಗೊತ್ತಾಗಿರುವ ಸಂಗತಿ. ಆದರೆ, ನಮ್ಮೆಲ್ಲರಿಗೆ ಗೊತ್ತ್ತಿರದ ಸಂಗತಿಯೊಂದಿದೆ. ಹರ್ನಾಜ್ ಅವರು ಪೇಜೆಂಟ್​ನಲ್ಲಿ ಧರಿಸಿದ ಗೌನು ವಿಶ್ವದ ಗಮನ ಸೆಳೆದಿವೆ. ಅದನ್ನು ವಿನ್ಯಾಸಗೊಳಿಸಿದ್ದು ಈ ವರ್ಷದ ಆರಂಭದಲ್ಲಿ ಹೆಣ್ಣಾಗಿ ಪರಿವರ್ತನೆಗೊಂಡ ಸೈಶಾ ಶಿಂಧೆ. ಇವರ ಮುಂಚಿನ ಹೆಸರು ಸ್ವಪ್ನೀಲ್ ಶಿಂಧೆ ಆಗಿತ್ತು. ತನ್ನಲ್ಲಿ ಹೆಣ್ಣಿನ ಗುಣಲಕ್ಷಣಗಳಿವೆ ಅಂತ ಮನವರಿಕೆಯಾದ ನಂತರ ಸ್ವಪ್ನೀಲ್ ಲಿಂಗ ಪರಿವರ್ತನೆ ಪ್ರಕ್ರಿಯೆಗೊಳಗಾಗಿ ಸೈಶಾ ಶಿಂಧೆ ಆಗಿದ್ದಾರೆ.

ಸೋಮವಾರ ಹರ್ನಾಜ್ ಸಂಧು ಧರಿಸಿದ ಮನಮೋಹಕ ಮತ್ತು ಹಲವಾರು ಆಭರಣ ರೀತಿಯ ಸಾಮಗ್ರಿಗಳಿಂದ ವಿನ್ಯಾಸಗೊಳಿಸಿದ ಬೆಳ್ಳಿವರ್ಣದ ಗೌನು ಈಗ ಇತಿಹಾಸದ ಭಾಗವಾಗಿದೆ. ಹರ್ನಾಜ್ ಜಾಗತಿಕ ಸುಂದರಿ ಅಂತ ಘೋಷಣೆಯಾಗುತ್ತಿದ್ದಂತೆ ಎಲ್ಲರಿಗಿಂತ ಹೆಚ್ಚು ಸಂಭ್ರಮಿಸಿದವರು ನಿಸ್ಸಂದೇಹವಾಗಿ ಸೈಶಾ.

ಕೂಡಲೇ ಅವರು ತಮ್ಮ ಇನ್ಸ್ಟಾಗ್ರಾಮ್ ‘ನಾವು ಅದನ್ನು ಸಾಧಿಸಿಬಿಟ್ಟಿದ್ದೇವೆ!’ ಅಂತ ಪೋಸ್ಟ್ ಮಾಡಿದ್ದಾರೆ. ಅದರೊಂದಿಗೆ ಅವರು ಫ್ಲೋರ್ ಮೇಲಿನ ಕಸವನ್ನೆಲ್ಲ ಗುಡಿಸುವ ಹಾಗೆ ಕಾಣುವ ಗೌನನ್ನು ತೊಟ್ಟಿರುವ ಹರ್ನಾಜ್ ಅವರ ಇಮೇಜನ್ನು ಪೋಸ್ಟ್ ಮಾಡಿದ್ದಾರೆ. ಸೈಶಾ ಈ ವರ್ಷ ಜನೆವರಿಯಲ್ಲಿ ತೃತೀಯ ಲಿಂಗಿಯಾಗಿ ಬದಲಾಗಿದ್ದಾರೆ. ಅವರು ಲಿಂಗ ಪರಿವರ್ತನೆಗೊಳಗಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹೇಳಿಕೊಂಡಿದ್ದರು.

‘20 ರ ವಯಸ್ಸಿನಲ್ಲಿ ನಾನು ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯಲ್ಲಿ (NIFT) ವ್ಯಾಸಂಗ ಮಾಡುತ್ತಿದ್ದಾಗ ನನ್ನ ದೈಹಿಕ ರಚನೆ ಮತ್ತು ಸ್ವರೂಪವನ್ನು ಅಂಗೀಕರಿಸಿಕೊಳ್ಳುವ ಧೈರ್ಯ ತಂದುಕೊಂಡೆ. ನಾನು ಸಲಿಂಗಿಯಾಗಿದ್ದರಿಂದ ಪುರುಷರೆಡೆ ಆಕರ್ಷಿತನಾಗುತ್ತಿದ್ದೇನೆ ಎಂಬ ನಂಬಿಕೆಯಲ್ಲೇ ಕೆಲ ವರ್ಷಗಳನ್ನು ಹಾಗೆಯೇ ದೂಡಿದೆ. ಆದರೆ 6 ವರ್ಷಗಳ ಹಿಂದೆ ನನ್ನನ್ನು ನಾನು ಅಂಗೀಕರಿಸಿಕೊಂಡೆ, ಮತ್ತು ನೀವು ಸಹ ಇದನ್ನು ಅಂಗೀಕರಿಸಬೇಕೆಂದು ಆಶಿಸುತ್ತೇನೆ. ನಾನೀಗ ಸಲಿಂಗಿಯಲ್ಲ, ನಾನೊಬ್ಬ ಮಂಗಳಮುಖಿ (ಟ್ರಾನ್ಸ್​ವುಮನ್),’ ಎಂದು ಸೈಶಾ ಬರೆದುಕೊಂಡಿದ್ದರು.

ಇದನ್ನೂ ಓದಿ:   ಶಾಲೆಯಲ್ಲಿ ಓದುವಾಗ ಸಪೂರಳಾಗಿದ್ದ, ಸ್ನೇಹಿತೆಯರಿಂದ ಗೇಲಿಗೊಳಗಾಗುತ್ತಿದ್ದ ಹರ್ನಾಜ್ ಸಂಧು ಈಗ ಭುವನ ಸುಂದರಿ!

Follow us on

Click on your DTH Provider to Add TV9 Kannada