ಉಕ್ರೇನಿಂದ ಸುರಕ್ಷಿತವಾಗಿ ವಾಪಸ್ಸು ಬಂದ ಮಕ್ಕಳನ್ನು ನೋಡಿ ಈ ತಾಯಂದಿರ ಆನಂದಕ್ಕೆ ಪಾರವೇ ಇರಲಿಲ್ಲ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 05, 2022 | 8:51 PM

ಹಾವೇರಿ ಜಿಲ್ಲೆಯ ನವೀನ್ ಶೇಖರಪ್ಪ ಗ್ಯಾನಗೌಡರ್ ಖಾರ್ಕಿವ್ ನಲ್ಲಿ ಶೆಲ್ಲಿಂಗ್ ಗೆ ಬಲಿಯಾದ ನಂತರ ತಂದೆತಾಯಿಗಳ ಆತಂಕ ಮತ್ತು ಭಯ ಇಮ್ಮಡಿಗೊಂಡಿತ್ತು. ಅದಾದ ನಂತರವೇ ಸುಮಾರು 12,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಭಾರತಕ್ಕೆ ಕರತರಲಾಗಿದೆ.

ಈ ತಾಯಂದಿರಿಗೆ ಆಗುತ್ತಿರುವ ಸಂತೋಷ ಕೇವಲ ಅವರಷ್ಟೇ ವರ್ಣಿಸಬಲ್ಲರು ಮಾರಾಯ್ರೇ. ವಿಡಿಯೋನಲ್ಲಿ ಇಬ್ಬರು ಅಮ್ಮಂದಿರು ನಿಮಗೆ ಕಾಣುತ್ತಾರೆ. ಅವರಿಬ್ಬರ ಮಕ್ಕಳು ಉಕ್ರೇನಲ್ಲಿ ಮೆಡಿಕಲ್ ವ್ಯಾಸಂಗ ಮಾಡಲು ಹೋಗಿದ್ದರು ಮತ್ತು ಶನಿವಾರ ಭಾರತಕ್ಕೆ ಮರಳಿದರು. ಕಳೆದೆರಡು ವಾರಗಳಿಂದ ಉಕ್ರೇನಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಅನುಭವಿಸಿದ ಆತಂಕ, ಭಯ ಎಲ್ಲರಿಗೂ ಗೊತ್ತಿದೆ. ತಮ್ಮ ಮಕ್ಕಳು ಅನ್ನ ನೀರಿಲ್ಲದೆ ದನದ ಕೊಟ್ಟಿಗೆಗಳಂಥ ಬಂಕರ್ಗಳಲ್ಲಿ, ಮೆಟ್ರೋ ರೇಲ್ವೇ ಸ್ಟೇಷನ್ಗಳಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಆಶ್ರಯ ಪಡೆದಿರುವುದು, ಅಲ್ಲಿಂದಲೇ ತಾವು ಅನುಭವಿಸುತಿದ್ದ ಯಾತನೆಯನ್ನು ವಿಡಿಯೋ ಕಾಲ್ ಗಳ ಮೂಲಕ ತೋಡಿಕೊಂಡಿದ್ದು-ಇದನ್ನೆಲ್ಲ ನೋಡಿದ ತಂದೆ ತಾಯಿಗಳು ತಮ್ಮ ನೋವು ಸಂಕಟವನ್ನು ಹೇಗೆ ಸಹಿಸಿಕೊಂಡರೋ?

ಉಕ್ರೇನಲ್ಲಿ ಓದುತ್ತಿದ್ದ ಎಲ್ಲ ಭಾರತೀಯರು ವಿದ್ಯಾರ್ಥಿಗಳು ವಾಪಸ್ಸಾಗಿಲ್ಲ, ಸುಮಾರು 1,500-2,000 ವಿದ್ಯಾರ್ಥಿಗಳು ಈಗಲೂ ಅಲ್ಲೇ ಸಿಲುಕಿದ್ದಾರೆ. ಅವರ ತಂದೆ ತಾಯಿಗಳು ದೇವರ ಮೇಲೆ ಭಾರ ಹಾಕಿ ಅವರಿಗಾಗಿ ಕಾಯುತ್ತಿದ್ದಾರೆ.

ಈ ವಿಡಿಯೋನಲ್ಲಿ ನಮಗೆ ಇಬ್ಬರು ವಿದ್ಯಾರ್ಥಿನಿಯರು ಕಾಣುತ್ತಿದ್ದಾರೆ. ಒಬ್ಬ ವಿದ್ಯಾರ್ಥಿಯ ಹೆಸರು ನಂದಿನಿ ಮತ್ತು ಮತ್ತೊಬ್ಬರ ಹೆಸರು ನಮಗೆ ಗೊತ್ತಾಗಿಲ್ಲ. ಮಕ್ಕಳನ್ನು ಕಂಡಾಕ್ಷಣ ಅವರನ್ನು ತಬ್ಬಿಕೊಂಡು ತಾಯಂದಿರು ಮುದ್ದಾಡುತ್ತಿದ್ದಾರೆ. ಅವರ ಹರ್ಷ ಸಂಭ್ರಮ ಅರ್ಥವಾಗುವಂಥದ್ದೇ.

ಹಾವೇರಿ ಜಿಲ್ಲೆಯ ನವೀನ್ ಶೇಖರಪ್ಪ ಗ್ಯಾನಗೌಡರ್ ಖಾರ್ಕಿವ್ ನಲ್ಲಿ ಶೆಲ್ಲಿಂಗ್ ಗೆ ಬಲಿಯಾದ ನಂತರ ತಂದೆತಾಯಿಗಳ ಆತಂಕ ಮತ್ತು ಭಯ ಇಮ್ಮಡಿಗೊಂಡಿತ್ತು. ಅದಾದ ನಂತರವೇ ಸುಮಾರು 12,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಭಾರತಕ್ಕೆ ಕರತರಲಾಗಿದೆ. ಉಳಿದ ಮಕ್ಕಳನ್ನೂ ಆದಷ್ಟು ಬೇಗ ತರುವ ಪ್ರಯತ್ನಗಳನ್ನು ಭಾರತ ಸರ್ಕಾರ ಮಾಡುತ್ತಿದೆ.

ಇದನ್ನೂ ಓದಿ:  Russia-Ukraine War: ರಷ್ಯಾ ವಶಕ್ಕೆ ಸಿಲುಕಿ ನರಕವಾಗಿದ್ದ ಉಕ್ರೇನ್​ನ ಬಂದರು ನಗರಿ ಮರಿಪೊಲ್ ಜನರೀಗ ಕೊಂಚ ನಿರಾಳ