ಟ್ರಾಫಿಕ್ ಜಾಮ್​ನಿಂದ ಸಿಗಲಿದೆ ಇನ್ನು ಮುಕ್ತಿ, ಕೆಲವೇ ದಿನಗಳಲ್ಲಿ ಲಾಂಚ್ ಆಗುತ್ತಿದೆ ಹೈಬ್ರಿಡ್ ಹಾರುವ ಕಾರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 28, 2021 | 4:16 PM

ಕಾರಿನ ತೂಕ 1,100 ಕೆಜಿ ಇದ್ದು ಟೇಕ್ ಆಫ್ ಮಾಡುವಾಗ ಅದು ಇನ್ನೂ 200 ಕೆಜಿಗಳಷ್ಟು ಹೆಚ್ಚುವರಿ ತೂಕವನ್ನು ಹೊತ್ತು ಹಾರಬಲ್ಲದು. ಕಾರು ಎಲೆಕ್ಟ್ರಿಕ್ ಬ್ಯಾಟರಿಯನ್ನು ಹೊಂದಿರುವುದರಿಂದ ವಿಮಾನದಂಥ ಈ ವಾಹನವು ಹೈಬ್ರಿಡ್ ಎಲೆಕ್ಟ್ರಿಕ್ ವಿಟಿಒಎಲ್ ಆಗಿದೆ.

ಟ್ರಾಫಿಕ್ ಜಾಮ್​ನಿಂದ ತಪ್ಪಿಸಿಕೊಳ್ಳಲು ಏನಾದರೂ ಉಪಾಯವಿದೆಯೇ ಅಂತ ಯೋಚಿಸುವ ಸಾವಿರಾರು ಜನರಿಗೆ ಚೆನೈಯಲ್ಲಿರುವ ವಿನಾಟಾ ಏರೊಮೊಬಿಲಿಟಿ ಸಂಸ್ಥೆಯು ಒಂದು ಪರಿಹಾರ ಹುಡುಕಿದೆ. ಸಂಸ್ಥೆಯ ಮೊದಲ ಹೈಬ್ರಿಡ್ ಹಾರುವ ಕಾರು ಅಕ್ಟೋಬರ್ 5 ರಂದು ಲಂಡನ್​ನಲ್ಲಿ ನಡೆಯಲಿರುವ ಹೆಲಿಟೆಕ್ ಎಕ್ಸಿಬಿಷನ್ ನಲ್ಲಿ ಲಾಂಚ್ ಆಗಿ ಪ್ರದರ್ಶನಗೊಳ್ಳಲಿದೆ. ನಗರ ಪ್ರದೇಶಗಳಲ್ಲಿ ಗಾಳಿಯಲ್ಲಿ ಸಂಚರಿಸುವ ವಾಹನಗಳ ಎರಡು ಕೆಟೆಗಿರಿಗಳಿವೆ- ಒಂದು ಪ್ರಯಾಣಿಕರಿಗಾಗಿ ಹಾರುವ ಕಾರು ಮತ್ತೊಂದು ಸರಕು ಸಾಗಣೆಗೆ. ಎಕ್ಸಿಬಿಷನ್ ನಲ್ಲಿ ವಿನಾಟಾ ಕಂಪನಿಯು 2-ಸೀಟಿನ ಹಾರುವ ಕಾರಿನ ಜೊತೆಗೆ ಏರ್ ಕಾರ್ಗೋ ಕಾರನ್ನು ಅನಾವರಣಗೊಳಿಸಲಿದೆ.

ಸರಿ, ಈ ಕಾರುಗಳಿಗೆ ಇಂಧನ ಯಾವುದು ಅಂತ ನಿಮ್ಮ ಯೋಚನೆಯಾಗಿರಬಹುದು. ಕಂಪನಿ ನೀಡಿರುವ ಮಾಹಿತಿ ಪ್ರಕಾರ ಈ ಕಾರುಗಳಲ್ಲಿ ಜೈವಿಕ ಇಂಧನ (ಬಯೋ ಫ್ಯುಯೆಲ್) ಬಳಸಲಾಗುವುದು. ಜೈವಿಕ ಇಂಧನವು ಒಂದು ರೀತಿಯ ಶಕ್ತಿಯ ಸಂಪನ್ಮೂಲವಾಗಿದ್ದು ಅದು ಸೂಕ್ಷ್ಮಜೀವಿ, ಸಸ್ಯ ಅಥವಾ ಪ್ರಾಣಿಗಳ ಸೆಗಣಿಯಿಂದ ಪಡೆಯಲಾಗುತ್ತದೆ ಮತ್ತು ಇದು ಸಾಗಿಸಲು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಡೆಲಿವರಿ ಮಾಡಲು ಸುಲಭವಾಗಿರುವ ಜೊತೆಗೆ ಉರುವಲಾಗಿ ಉಪಯೋಗಿಸುವಾಗ ಮಾಲಿನ್ಯದ ಚಿಂತೆ ಇರುವುದಿಲ್ಲ.

ತಮ್ಮ ಹಾರುವ ಕಾರು ಜೈವಿಕ ಇಂಧನದ ಮೂಲಕ ಚಲಿಸುವದರಿಂದ ಪರಿಸರಕ್ಕೆ ಯಾವುದೇ ರೀತಿ ಹಾನಿಯಿಲ್ಲ ಎಂದು ವಿನತಾ ಏರೋಮೊಬಿಲಿಟಿ ಹೇಳಿಕೊಂಡಿದೆ.

ಅಂದಹಾಗೆ, ಕಾರಿನ ತೂಕ 1,100 ಕೆಜಿ ಇದ್ದು ಟೇಕ್ ಆಫ್ ಮಾಡುವಾಗ ಅದು ಇನ್ನೂ 200 ಕೆಜಿಗಳಷ್ಟು ಹೆಚ್ಚುವರಿ ತೂಕವನ್ನು ಹೊತ್ತು ಹಾರಬಲ್ಲದು. ಕಾರು ಎಲೆಕ್ಟ್ರಿಕ್ ಬ್ಯಾಟರಿಯನ್ನು ಹೊಂದಿರುವುದರಿಂದ ವಿಮಾನದಂಥ ಈ ವಾಹನವು ಹೈಬ್ರಿಡ್ ಎಲೆಕ್ಟ್ರಿಕ್ ವಿಟಿಒಎಲ್ ಆಗಿದೆ. ಕಾರು ಕೊ-ಎಕ್ಸಿಯಲ್-ಕ್ವಾಡ್-ರೊಟರ್ ಸಹ ಹೊಂದಿದೆ.

ಒಮ್ಮೆ ಟೇಕಾಫ್ ಆದರೆ ಹಾರುವ ಕಾರು 100 ಕಿಮೀ ಕ್ರಮಿಸಬಲ್ಲದು ಮತ್ತು ಅದರ ಗರಿಷ್ಠ ವೇಗ 120 ಕಿಮೀ/ಗಂಟೆ ಆಗಿದೆ. 3,000 ಅಡಿ ಎತ್ತರದಲ್ಲಿ ಈ ಕಾರು ಸುಮಾರು 60 ನಿಮಿಷಗಳ ಕಾಲ ಗಾಳಿಯಲ್ಲಿ ಹಾರಬಲ್ಲದು ಅಂತ ಕಂಪನಿ ಹೇಳಿದೆ.

ಇದನ್ನೂ ಓದಿ: Viral Video: ಮದುವೆಯಲ್ಲಿ ಕುಣಿಯುತ್ತಾ ಕೆಳಗೆ ಬಿದ್ದ ವಧು, ವರ; ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ವೈರಲ್