ದೇವರಮನೆ, ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಪ್ರವಾಸಿಗರ ಹುಚ್ಚಾಟ: ಸಂಚಾರಕ್ಕೆ ಸಮಸ್ಯೆ

| Updated By: ಗಣಪತಿ ಶರ್ಮ

Updated on: Jul 01, 2024 | 9:03 AM

ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಪ್ರವಾಸಿಗರು ಸಂಚಾರಕ್ಕೆ ಅಡಚಣೆಯಾಗುವಂತೆ ಕಾರುಗಳನ್ನು ನಿಲ್ಲಿಸಿಕೊಂಡು ರಸ್ತೆ ಮಧ್ಯೆಯೇ ಹುಚ್ಚಾಟವಾಡಿದ ಘಟನೆ ಚಿಕ್ಕಮಗಳೂರಿನ ದೇವರಮನೆಯಲ್ಲಿ ನಡೆದಿದೆ. ಮತ್ತೊಂದೆಡೆ, ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿ ವಾಹನ ನಿಲ್ಲಿಸಿ ಪ್ರಯಾಣಿಕರು, ಪ್ರವಾಸಿಗರು ಜಾರುಬಂಡೆಗಳ ಮೇಲೆ ಹತ್ತಿ ಹುಚ್ಚಾಟ ಮಾಡುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಚಿಕ್ಕಮಗಳೂರು, ಜುಲೈ 1: ಕಾಫಿನಾಡು ‌ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರಮನೆ ಪ್ರವಾಸಿಗರ ಮೋಜು-ಮಸ್ತಿಯ ಅಡ್ಡವಾಗಿರುವುದು ಕಂಡುಬಂದಿದೆ. ಹೊಯ್ಸಳರ ಕಾಲದ ಇತಿಹಾಸ ಪ್ರಸಿದ್ಧ ಕಾಲಭೈರವೇಶ್ವರನ ಕ್ಷೇತ್ರವಾಗಿರುವ ದೇವರಮನೆಯಲ್ಲಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗುವಂತೆ ಕಾರು ನಿಲ್ಲಿಸಿಕೊಂಡು ಪ್ರವಾಸಿಗರು ಮೋಜು, ಮಸ್ತಿ, ಡ್ಯಾನ್ಸ್ ಮಾಡಿ ವಾಹನಗಳು ಓಡಾಡಲು ಜಾಗವಿಲ್ಲದಂತೆ ಮಾಡುತ್ತಿದ್ದಾರೆ.

ಪ್ರವಾಸಿಗರು ರಸ್ತೆ ಮಧ್ಯೆ ಕಾರು ನಿಲ್ಲಿಸಿಕೊಂಡು ಕುಣಿದು ಕುಪ್ಪಳಿಸಿರುವ ವಿಡಿಯೋ ದೊರೆತಿದೆ. ಪೊಲೀಸರ ಭಯ ಹೇಗೂ ಇಲ್ಲ, ಸ್ಥಳೀಯರ ಮಾತಿಗೆ ಕಿಮ್ಮತ್ತು ನೀಡದೆ ಪ್ರಪಾತದ ಸ್ಥಳದಲ್ಲೂ ಪ್ರವಾಸಿಗರು ಮೋಜು ಮಾಡುತ್ತಿದ್ದಾರೆ. ಮಳೆ ಮಂಜಿನಲ್ಲಿ ಪ್ರವಾಸಿಗರ ಮೋಜು ಮಸ್ತಿ ಹೆಚ್ಚಾಗಿದೆ. ಈ ಪ್ರದೇಶ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ.

ಇದನ್ನೂ ಓದಿ: ಚಿಕ್ಕಮಗಳೂರು ಮುಳ್ಳಯ್ಯನಗಿರಿಯಲ್ಲಿ ಕಂಟ್ರೋಲ್ ಟೂರಿಸಂ, ಗಿರಿಗೆ ಬರಲು ಬುಕ್ ಮಾಡಿಕೊಂಡು ಬನ್ನಿ

ಚಾರ್ಮಾಡಿ ಘಾಟಿಯಲ್ಲೂ ಪ್ರವಾಸಿಗರ ಸಾಹಸ

ಚಾರ್ಮಾಡಿ ಘಾಟಿ ರಸ್ತೆಯಲ್ಲಿಯೂ ಪ್ರಯಾಣಿಕರು, ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿದ್ದಾರೆ. ಮಳೆಯಿಂದ ಸೃಷ್ಟಿಯಾಗಿರುವ ಕಿರು ಜಲಪಾತಗಳ ವೀಕ್ಷಣೆಗೆ ಬಂಡೆ ಮೇಲೆ ‌ನಿಂತು ಹುಚ್ಚಾಟ ಮಾಡುತ್ತಿದ್ದಾರೆ. ಜಾರುವ ಬಂಡೆಗಳ ಮೇಲೆ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಜಾರುವ ಬಂಡೆ ಮೇಲಿಂದ ಬಿದ್ದು ಕೈಕಾಲು ಮುರಿದುಕೊಂಡ ಕೆಲವು ಉದಾಹರಣೆಗಳಿದ್ದರೂ ಪ್ರವಾಸಿಗರು ಬುದ್ಧಿ ಕಲಿತಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on