ತೂಗು ಸೇತುವೆ ಮೇಲೆ ಕಾರು ಚಲಾಯಿಸಿದ ಪ್ರವಾಸಿಗ, ಪ್ರಕರಣ ದಾಖಲು
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿವಪುರದ ತೂಗು ಸೇತುವೆ ಮೇಲೆ ಪ್ರವಾಸಿಗ ಹುಚ್ಚಾಟವಾಡಿದ್ದಾನೆ.
ಉತ್ತರ ಕನ್ನಡ: ಉತ್ತರ ಕನ್ನಡ (Uttar Kannada) ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿವಪುರದ ತೂಗು ಸೇತುವೆ (Bridge) ಮೇಲೆ ಪ್ರವಾಸಿಗ ಹುಚ್ಚಾಟವಾಡಿದ್ದಾನೆ. ಗುಜರಾತಿನ ಮೋರ್ಬಿಯಲ್ಲಿನ ತೂಗು ಸೇತುವೆ ಕುಸಿದು ಪ್ರಾಣ ಕಳೆದುಕೊಂಡಿದ್ದು ಹಸಿರಿರುವಾಗಲೇ ಪ್ರವಾಸಿಗ ಅಜಾದ್ ಸಯ್ಯದ್ (25) ಶಿವಪುರದ ತೂಗು ಸೇತುವೆ ಮೇಲೆ ಕಾರು ಚಲಾಯಿಸಿ ದರ್ಪ ಮೇರೆದಿದ್ದಾನೆ. 3 ಕೋಟಿ ರೂ ವೆಚ್ಚದಲ್ಲಿ 2015 ರಲ್ಲಿ ಕಾಳಿ ನದಿಗೆ ಅಡ್ಡಲಾಗಿ ಉಳವಿ ಮತ್ತು ಯಲ್ಲಾಪುರಕ್ಕೆ ಸಂಪರ್ಕ ಕಲ್ಪಿಸಲು ತೂಗು ಸೇತುವೆ ನಿರ್ಮಾಣ ಮಾಡಲಾಗಿದೆ.
ತೂಗು ಸೇತುವೆ ಮೇಲೆ 100 ಕ್ಕಿಂತ ಹೆಚ್ಚು ಜನ, ಭಾರಿ ತೂಕದ ವಾಹನಗಳಿ ಅವಕಾಶವಿಲ್ಲ ಎಂದು ಸೂಚನ ಫಲಕ ವಿದೆ. ಆದರೂ ನಿಯಮ ಮೀರಿ ಜೊತೆಗೆ ಸ್ಥಳೀಯರು ಕಾರು ಚಲಾಯಿಸಬೇಡ ಅಂದರು ಅವರ ಮಾತು ಮೀರಿ ಪ್ರವಾಸಿಗ ಅಜಾದ್ ಸಯ್ಯದ್ ತೂಗು ಸೇತುವೆ ಮೇಲೆ ಕಾರು ಚಲಾಯಿಸಿದ್ದಾನೆ. ಆಗ ಸ್ಥಳೀಯರು ಚಾಲಕನನ್ನು ತರಾಟೆಗೆ ತೆಗೆದುಕೊಂಡು ರಿವರ್ಸ್ ಕಳಿಸಿದ್ದಾರೆ. ಸದ್ಯ ಚಾಲಕ ಅಜಾದ್ ಸಯ್ಯದ್ ವಿರುದ್ಧ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಕಲಂ 279, 336 ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು, ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.