ಏಕಾಏಕಿ ರೌದ್ರಾವತಾರ ತಾಳಿದ ಅರೆಬೈಲ್ ಫಾಲ್ಸ್ ಮಧ್ಯದಲ್ಲಿ ಸಿಲುಕಿದ ಪ್ರವಾಸಿಗರು: ರಕ್ಷಣೆಗೆ ರೋಚಕ ಕಾರ್ಯಾಚರಣೆ
ಫಾಲ್ಸ್ ವೀಕ್ಷಣೆಗೆ ತೆರಳಿದ್ದ ಹುಬ್ಬಳ್ಳಿಯ ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಜಲಪಾತದಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಸಮಯಪ್ರಜ್ಞಯಿಂದ ಅವರನ್ನು ರಕ್ಷಣೆ ಮಾಡಲಾಗಿದೆ. ಜಲಪಾತದ ರೌದ್ರ ನರ್ತನ ಹಾಗೂ ಪ್ರವಾಸಿಗರ ರಕ್ಷಣೆಯ ವಿಡಿಯೋ ಈಗ ವೈರಲ್ ಆಗುತ್ತಿದೆ.
ಕಾರವಾರ, ಜುಲೈ 17: ಜಲಪಾತ ವೀಕ್ಷಣೆಗೆ ಹೋಗಿ ಏಕಾಏಕಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದು ಜಲಪಾತ ಮಧ್ಯದಲ್ಲೇ ಪ್ರವಾಸಿಗರು ಸಿಲುಕಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟ ಭಾಗದ ಅರೆಬೈಲ್ ಜಲಪಾತದಲ್ಲಿ ನಡೆದಿದೆ. ಜಲಪಾತದ ಮಧ್ಯದಲ್ಲಿ ಸಿಲುಕಿದ್ದ ಮೂರು ಜನ ಪ್ರವಾಸಿಗರನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣೆ ಮಾಡಿದರು. ಹುಬ್ಬಳ್ಳಿಯಿಂದ ಜಿಲ್ಲೆಯ ಪ್ರವಾಸಕ್ಕೆ ಬಂದಿದ್ದ ಖಾಸಗಿ ಮೆಡಿಕಲ್ ಕಾಲೇಜಿನ ಐವರು ವಿದ್ಯಾರ್ಥಿಗಳು, ಅರೆಬೈಲ್ ಘಟ್ಟದ ಕಾಡಿನ ಮಧ್ಯದಲ್ಲಿ ಇರುವ ಅರೆಬೈಲ್ ಜಲಪಾತಕ್ಕೆ ತೆರಳಿದ್ದರು. ಇದೇ ವೇಳೆ, ಚಿಕ್ಕ ಹಳ್ಳ ದಾಟುತ್ತಿರುವಾಗ ಏಕಾಏಕಿ ಜಲಪಾತ ಅಬ್ಬರಿಸಿದೆ. ರೌದ್ರಾವತಾರ ತಾಳಿ ನೀರು ಧುಮ್ಮಿಕ್ಕಲು ಶುರುವಾಗಿದೆ. ಇದರಿಂದಾಗಿ ಪ್ರವಾಸಿಗರು ಹಳ್ಳದ ಮಧ್ಯದಲ್ಲೇ ಸಿಲುಕಿಕೊಂಡಿದ್ದಾರೆ. ನೀರಿನ ಪ್ರಮಾಣ ಅಲ್ಪ ಇಳಿಕೆಯಾಗುತಿದ್ದಂತೆಯೇ ಕಾರ್ಯಾಚರಣೆ ನಡೆಸಿ ಅವರ ರಕ್ಷಣೆ ಮಾಡಲಾಯಿತು. ಭಾನುವಾರ ಈ ಘಟನೆ ನಡೆದಿದ್ದು, ಸದ್ಯ ಅದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಇಲ್ಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
