ಟೋಯಿಂಗ್ ಮಾಫಿಯಾ ಕೇವಲ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿಲ್ಲ, ತುಮಕೂರಿನಲ್ಲೂ ಅದರ ಬೇರುಗಳು ಕಂಡಿವೆ!

ಟೋಯಿಂಗ್ ಮಾಫಿಯಾ ಕೇವಲ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿಲ್ಲ, ತುಮಕೂರಿನಲ್ಲೂ ಅದರ ಬೇರುಗಳು ಕಂಡಿವೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 03, 2022 | 7:10 PM

ಸ್ವಲ್ಪ ಸಮಯದ ನಂತರ ಒಬ್ಬ ಟ್ರಾಫಿಕ್ ಇನ್ಸ್ಪೆಕ್ಟರ್ ಅಲ್ಲಿಗೆ ಬರುತ್ತಾರೆ. ಅವರೊಂದಿಗೂ ಜನ ವಾದಕ್ಕಿಳಿಯುತ್ತಾರೆ. ಇನ್ಸ್ಪೆಕ್ಟರ್ ಜನರಿಗೆ ಸಮಜಾಯಿಷಿ ನೀಡುತ್ತಿರುವುದು ವಿಡಿಯೋನಲ್ಲಿ ಕಾಣುತ್ತದೆ. ಆದರೆ ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ಜನರಿಗಿಲ್ಲ.

ಟೋಯಿಂಗ್ ಮಾಫಿಯಾ (Towing Mafia) ಕೊರೋನಾದಂತೆ ಸರ್ವವ್ಯಾಪಿ ಅನಿಸುತ್ತೆ ಮಾರಾಯ್ರೇ. ಇದು ಬೆಂಗಳೂರು ಮಹಾನಗರಕ್ಕೆ ಮಾತ್ರ ಮೀಸಲಾಗಿದೆ ಅಂತ ನಗರದ ನಿವಾಸಿಗಳು ಭಾವಿಸಿದ್ದರೆ ಅವರಲ್ಲಿ ಕೊಂಚ ಸಮಾಧಾನ ಮೂಡಿಸುವ ವಿಡಿಯೋ ಇಲ್ಲಿದೆ. ಈ ವಿಡಿಯೋ ನಮಗೆ ತುಮಕೂರು (Tumakuru) ನಗರದಿಂದ ಲಭ್ಯವಾಗಿದೆ. ಅಲ್ಲೂ ಟೋಯಿಂಗ್ ಮಾಫಿಯಾ ಹೆಡೆಯೆತ್ತಿದೆ. ತುಮಕೂರಿನ ಉಪನೋಂದಣಾಧಿಕಾರಿ (sub-registrar office) ಕಚೇರಿಯ ಎದುರು ನಿಲ್ಲಿಸಿದ್ದ ವಾಹನಗಳನ್ನು ಎತ್ಹಾಕಿಕೊಂಡು ಹೋಗುವ ಹುನ್ನಾರ ನಡೆಸಿದ್ದ ಸಂಚಾರಿ ಪೊಲೀಸರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರ ಕ್ರಮವನ್ನು ಮೊದಲಿಗೆ ಒಬ್ಬ ವ್ಯಕ್ತಿ ಪ್ರಶ್ನಿಸಲಾರಂಭಿಸಿದ್ದಾರೆ. ಆಮೇಲೆ ಜನ ಘೇರಾಯಿಸಿ ಅವರ ಜೊತೆಗೂಡಿದ್ದಾರೆ. ಜನ ಹೀಗೆ ಉಲ್ಟಾ ಹೊಡೆಯುತ್ತಾರೆ ಅಂತ ಪೊಲೀಸರು ಭಾವಿಸಿರಲಿಕ್ಕಿಲ್ಲ. ಅವರ ನಡುವೆ ವಾಗ್ವಾದ ನಡೆದಿರುವುದು ಸಹ ನಿಮಗೆ ವಿಡಿಯೋನಲ್ಲಿ ಕಾಣಿಸುತ್ತದೆ.

ನೆರೆದಿರುವ ಜನರಲ್ಲಿ ಒಬ್ಬ ವ್ಯಕ್ತಿ ವಾಹನಗಳನ್ನು ಟೋ ಮಾಡಿಸಲು ಪ್ರಯತ್ನಿಸುತ್ತಿರುವ ಟ್ರಾಫಿಕ್ ದಫೇದಾರರಿಗೆ, ಯಾಕೆ ಹೀಗೆ ಮಾಡ್ತಾ ಇದ್ದೀರಿ ನೀವು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳುತ್ತಾರೆ. ಅದಕ್ಕೆ ದಫೇದಾರರು, ತನಗೆ ಅದೆಲ್ಲ ಗೊತ್ತಿಲ್ಲ, ಹೀಗೆ ಮಾಡು ಅಂತ ಹೇಳಲಾಗಿದೆ, ಹಾಗಾಗಿ ಮಾಡ್ತಾ ಇದ್ದೀನಿ, ಪ್ರಶ್ನೆ ಕೇಳುವುದಾದರೆ, ತನ್ನ ಮೇಲಧಿಕಾರಿಗಳನ್ನು ಕೇಳಿ ಅಂತ ಹೇಳುತ್ತಾರೆ.

ಸ್ವಲ್ಪ ಸಮಯದ ನಂತರ ಒಬ್ಬ ಟ್ರಾಫಿಕ್ ಇನ್ಸ್ಪೆಕ್ಟರ್ ಅಲ್ಲಿಗೆ ಬರುತ್ತಾರೆ. ಅವರೊಂದಿಗೂ ಜನ ವಾದಕ್ಕಿಳಿಯುತ್ತಾರೆ. ಇನ್ಸ್ಪೆಕ್ಟರ್ ಜನರಿಗೆ ಸಮಜಾಯಿಷಿ ನೀಡುತ್ತಿರುವುದು ವಿಡಿಯೋನಲ್ಲಿ ಕಾಣುತ್ತದೆ. ಆದರೆ ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ಜನರಿಗಿಲ್ಲ.

ಉಪನೋಂದಣಾಧಿಕಾರಿ ಕಚೇರಿಯ ಎದುರು ನಿಲ್ಲಿಸಿದ್ದ ವಾಹನಗಳನ್ನು ಯಾವ ಕಾರಣಕ್ಕೆ ಟೋ ಮಾಡಿಕೊಂಡು ಹೋಗ್ತೀರಿ ಅದನ್ನು ಹೇಳಿ ಅಂತ ಜನ ದುಂಬಾಲು ಬಿದ್ದಾಗ ಇನ್ಸ್ಪೆಕ್ಟರ್ ಮತ್ತು ದಫೇದಾರ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ.

ಇದನ್ನೂ ಓದಿ: ‘ಬೆಂಗಳೂರಿನಲ್ಲಿ 15 ದಿನಗಳ ಕಾಲ ಟೋಯಿಂಗ್ ವ್ಯವಸ್ಥೆ ರದ್ದು, ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ’