ಉಡುಪಿ: ಸಿಟಿ ಬಸ್ ನಿಲ್ದಾಣದ ಮುಂದೆಯೇ ಹೊತ್ತಿ ಉರಿದ ಕಟ್ಟಡ; ಮೊಬೈಲ್, ಹಾರ್ಡ್‌ವೇರ್ ಮಳಿಗೆಗಳು ಸುಟ್ಟು ಭಸ್ಮ!
ಉಡುಪಿಯ ಖಾದರ್ ಕಮರ್ಷಿಯಲ್ ಸಂಕೀರ್ಣದಲ್ಲಿ ಇಂದು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಮೊಬೈಲ್ ಮತ್ತು ಹಾರ್ಡ್‌ವೇರ್ ಮಳಿಗೆಗಳಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹರಡಿರಬಹುದೆಂದು ಶಂಕಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಉಡುಪಿ, ಏ.26: ನಗರದ ಪ್ರಮುಖ ವಾಣಿಜ್ಯ ಪ್ರದೇಶವಾದ ಸಿಟಿ ಬಸ್ ನಿಲ್ದಾಣದ ಸಮೀಪವಿರುವ ‘ಖಾದರ್ ಕಮರ್ಷಿಯಲ್’ ಸಂಕೀರ್ಣದಲ್ಲಿ ಇಂದು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ವ್ಯಾಪಿಸಿದ್ದು, ವ್ಯಾಪಾರಿಗಳು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಖಾದರ್ ಕಮರ್ಷಿಯಲ್ ಕಟ್ಟಡದಲ್ಲಿರುವ ಮೊಬೈಲ್ ಅಂಗಡಿ ಮತ್ತು ಹಾರ್ಡ್‌ವೇರ್ ಮಳಿಗೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಹಾರ್ಡ್‌ವೇರ್ ಅಂಗಡಿಯಲ್ಲಿದ್ದ ಸುಡುವ ಪದಾರ್ಥಗಳಿಂದಾಗಿ ಬೆಂಕಿ ತೀವ್ರವಾಗಿ ಹರಡಿದ್ದು, ದಟ್ಟವಾದ ಹೊಗೆ ಇಡೀ ಪ್ರದೇಶವನ್ನು ಆವರಿಸಿಕೊಂಡಿತ್ತು. ಪರಿಣಾಮವಾಗಿ ಮೊಬೈಲ್ ಅಂಗಡಿಯಲ್ಲಿದ್ದ ಬೆಲೆಬಾಳುವ ಹ್ಯಾಂಡ್‌ಸೆಟ್‌ಗಳು ಹಾಗೂ ಹಾರ್ಡ್‌ವೇರ್ ವಸ್ತುಗಳು ಬೆಂಕಿಯ ಕೆನ್ನಾಲಗೆಗೆ ಆಹುತಿಯಾಗಿವೆ. ಈ ಅವಘಡದಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಉಡುಪಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಎರಡು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ಜನನಿಬಿಡ ಪ್ರದೇಶವಾದ್ದರಿಂದ ಬೆಂಕಿ ನಂದಿಸುವ ಕಾರ್ಯ ಸವಾಲಾಗಿತ್ತು. ಸದ್ಯ ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟು ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ