ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್
ಅಮೆರಿಕದ ಘೋಷಿತ ಭಯೋತ್ಪಾದಕ ಸಂಘಟನೆ ಹಾಗೂ ವೆನೆಜುವೆಲಾದ ಕುಖ್ಯಾತ ಡ್ರಗ್ ಕಾರ್ಟೆಲ್ ‘ಟ್ರೆನ್ ಡಿ ಅರಾಗುವಾ’ ಮುಖ್ಯಸ್ಥ ಹೆಕ್ಟರ್ ರುಸ್ತೇನ್‌ಫೋರ್ಡ್ ಗೆರೆರೊ ಫ್ಲೋರೆಸ್ ಅಲಿಯಾಸ್ ‘ನಿನೋ ಗೆರೆರೊ’ ಅಮೆರಿಕದ ಭೀಕರ ವೈಮಾನಿಕ ದಾಳಿಗೆ ಬಲಿಯಾಗಿದ್ದಾನೆ. ಈ ಜಂಟಿ ಕಾರ್ಯಾಚರಣೆಯ ಯಶಸ್ಸನ್ನು ಘೋಷಿಸಿರುವ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಾಳಿಯ ರೋಮಾಂಚಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಾಷಿಂಗ್ಟನ್, ಜೂನ್ 13: ಅಮೆರಿಕದ ಭದ್ರತಾ ಪಡೆಗಳು ವೆನೆಜುವೆಲಾದಲ್ಲಿ ಭೀಕರ ಕಾರ್ಯಾಚರಣೆ ನಡೆಸಿದ್ದು, ಯುಎಸ್‌ನಿಂದ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲ್ಪಟ್ಟಿರುವ ‘ಟ್ರೆನ್ ಡಿ ಅರಾಗುವಾ’ ಕಾರ್ಟೆಲ್‌ನ ಕುಖ್ಯಾತ ನಾಯಕ ಹೆಕ್ಟರ್ ರುಸ್ತೇನ್‌ಫೋರ್ಡ್ ಗೆರೆರೊ ಫ್ಲೋರೆಸ್ (ನಿನೋ ಗೆರೆರೊ)ನನ್ನು ಕೊಂದಿವೆ. ಅಮೆರಿಕ ಸೇನೆಯು ನಡೆಸಿದ ಅತ್ಯಂತ ಮಾರಕ ವೈಮಾನಿಕ ದಾಳಿಯಲ್ಲಿ ಆತ ಹತನಾಗಿದ್ದಾನೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಧಿಕೃತವಾಗಿ ಪ್ರಕಟಿಸಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ಟ್ರುತ್ ಸೋಶಿಯಲ್’ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಟ್ರಂಪ್, ಆತನನ್ನು ಯಶಸ್ವಿಯಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ವೈಮಾನಿಕ ದಾಳಿಯ ದೃಶ್ಯವಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹಸಿರು ಮೇಲ್ಛಾವಣಿ ಹೊಂದಿರುವ ಕಟ್ಟಡವೊಂದಕ್ಕೆ ಕ್ಷಿಪಣಿ ಅಪ್ಪಳಿಸಿ, ಅದು ಕ್ಷಣಾರ್ಧದಲ್ಲಿ ಸ್ಫೋಟಗೊಳ್ಳುವ ದೃಶ್ಯವಿದೆ. “ಟ್ರೆನ್ ಡಿ ಅರಾಗುವಾ ಭಯೋತ್ಪಾದಕರಿಗೆ ಇನ್ನು ಮುಂದೆ ವೆನೆಜುವೆಲಾದಲ್ಲಾಗಲಿ ಅಥವಾ ಜಗತ್ತಿನ ಬೇರೆಲ್ಲೂ ಸುರಕ್ಷಿತ ತಾಣಗಳಿರುವುದಿಲ್ಲ. ನನ್ನ ನಾಯಕತ್ವದಲ್ಲಿ, ಇಂತಹ ಕ್ರೂರ ಕೊಲೆಗಡುಕರು ಮತ್ತು ಡ್ರಗ್ಸ್ ಮಾಫಿಯಾ ಲೀಡರ್‌ಗಳನ್ನು ಯಾವುದೇ ಸಮಯದಲ್ಲಿ, ಎಂತಹದೇ ಜಾಗದಲ್ಲಿದ್ದರೂ ಹುಡುಕಿ ತೆಗೆದು ನರಕಕ್ಕೆ ಕಳುಹಿಸುತ್ತೇವೆ” ಎಂದು ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದಾರೆ.
(Video Source: The White House X Account)
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ