ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು; ಪಶ್ಚಿಮ ಘಟ್ಟಗಳ ನಿಸರ್ಗ ವೈಭವಕ್ಕೆ ಪ್ರವಾಸಿಗರು ಫುಲ್ ಫಿದಾ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರದಿಂದ ಜಲವೈಭೋಗ ಸೃಷ್ಟಿಯಾಗಿದೆ. ಕಾರವಾರ ಮತ್ತು ಅಂಕೋಲಾ ನಡುವಿನ ರಾಷ್ಟ್ರೀಯ ಹೆದ್ದಾರಿಯ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅನೇಕ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಈ ನೈಸರ್ಗಿಕ ಸೌಂದರ್ಯವು ಪ್ರವಾಸಿಗರನ್ನು ಮತ್ತು ಪ್ರಕೃತಿ ಪ್ರೇಮಿಗಳನ್ನು ಆಕರ್ಷಿಸುತ್ತಿದ್ದು, ಸೆಲ್ಫಿ ಹಾಗೂ ರೀಲ್ಸ್‌ಗೆ ಉತ್ತಮ ತಾಣವಾಗಿದೆ.
ಮುಖ್ಯಾಂಶಗಳು
- ಉತ್ತರ ಕನ್ನಡದಲ್ಲಿ ಮುಂಗಾರು ಮಳೆಯ ಅಬ್ಬರ
- ಪಶ್ಚಿಮ ಘಟ್ಟಗಳ ಜಲಪಾತಗಳು ಮೈದುಂಬಿ ಕೊಂಡಿವೆ
- ಹೆದ್ದಾರಿಯ ಪಕ್ಕದಲ್ಲೇ ಜಲಧಾರೆಗಳಾಗಿ ಧುಮ್ಮಿಕ್ಕುತ್ತಿವೆ
ಕಾರವಾರ, ಜೂ,29: ಕರಾವಳಿ ಹಾಗೂ ಮಲೆನಾಡಿನ ಸುಂದರ ಸಂಗಮದ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಜಿಲ್ಲೆಯಾದ್ಯಂತ ಪ್ರಕೃತಿಯ ನಿಸರ್ಗ ಸೌಂದರ್ಯಕ್ಕೆ ಹೊಸ ಕಳೆ ಬಂದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಲ್ಲಿ ಜಲವೈಭೋಗ ಸೃಷ್ಟಿಯಾಗಿದ್ದು, ಪ್ರವಾಸಿಗರನ್ನು ಮತ್ತು ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಕಾರವಾರ ಮತ್ತು ಅಂಕೋಲಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಘಟ್ಟ ಪ್ರದೇಶಗಳಲ್ಲಿ ಸೃಷ್ಟಿಯಾಗಿರುವ ಜಲಪಾತಗಳು ನೋಡುಗರ ಕಣ್ಣು ಮನ ತಣಿಸುತ್ತಿವೆ. ಕಳೆದ ಕೆಲವು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬಿಡುವು ನೀಡದೆ ಸುರಿಯುತ್ತಿರುವ ಅಬ್ಬರದ ಮಳೆಯಿಂದಾಗಿ, ಪಶ್ಚಿಮ ಘಟ್ಟಗಳ ಜಲಪಾತಗಳು ಮೈದುಂಬಿ ಕೊಂಡಿವೆ. ಘಟ್ಟದ ದೈತ್ಯ ಬೆಟ್ಟಗಳನ್ನು ಸೀಳಿ ಬರುತ್ತಿರುವ ಮಳೆಯ ನೀರು, ಹೆದ್ದಾರಿಯ ಪಕ್ಕದಲ್ಲೇ ಜಲಧಾರೆಗಳಾಗಿ ಧುಮ್ಮಿಕ್ಕುತ್ತಿವೆ. ಕಡಿದಾದ ಬಂಡೆಗಳ ಮೇಲಿಂದ ಹಾಲಿನ ನೊರೆಯಂತೆ ಜಿನುಗುತ್ತಿರುವ ಹಾಗೂ ಭೋರ್ಗರೆಯುತ್ತಿರುವ ಈ ನೈಸರ್ಗಿಕ ಜಲಧಾರೆಗಳ ದೃಶ್ಯವನ್ನು ಸವಿಯಲು ಎರಡು ಕಣ್ಣುಗಳು ಸಾಲದಾಗಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಈ ಅದ್ಭುತ ಜಲವೈಭವ ಕಣ್ಣಿಗೆ ಕಟ್ಟುತ್ತಿರುವುದರಿಂದ, ಆ ಮಾರ್ಗವಾಗಿ ಚಲಿಸುವ ವಾಹನ ಸವಾರರು ಹಾಗೂ ಪ್ರವಾಸಿಗರು ತಮ್ಮ ವಾಹನಗಳನ್ನು ಬದಿಗೆ ನಿಲ್ಲಿಸಿ ಪ್ರಕೃತಿಯ ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹಾಲಿನಂತಹ ಜಲಧಾರೆಯ ಮುಂದೆ ನಿಂತು ಪ್ರವಾಸಿಗರು ಸೆಲ್ಫಿ ಹಾಗೂ ರೀಲ್ಸ್‌ಗಳನ್ನು ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

