‘ಆ ಕಾಲದಲ್ಲೇ ಶಂಕರ್ ನಾಗ್ ಲ್ಯಾಪ್ಟಾಪ್ ಬಳಸುತ್ತಿದ್ರು’; ಅಚ್ಚರಿ ವಿಚಾರ ಹಂಚಿಕೊಂಡ ಬಿರಾದಾರ್
ಶಂಕರ್ ನಾಗ್ ನಟನೆಯ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಪಡೆದಿದ್ದ ಅದೃಷ್ಟವಂತರಲ್ಲಿ ವೈಜನಾಥ್ ಬಿರಾದಾರ್ ಕೂಡ ಒಬ್ಬರು. ಆ ದಿನಗಳ ಕೆಲವು ವಿಶೇಷ ನೆನಪುಗಳನ್ನು ಬಿರಾದಾರ್ ಈಗ ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗ ಎಂದಿಗೂ ಮರೆಯದ ನಟ ಶಂಕರ್ ನಾಗ್. ಅಕಾಲಿಕ ಮರಣ ಹೊಂದಿದ ಅವರು ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿರುತ್ತಾರೆ. ಅವರ ಆಲೋಚನೆಗಳು ಸದಾ ಮುಂದಿರುತ್ತಿದ್ದವು ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಅಚ್ಚರಿ ಎಂದರೆ ಅವರು 1990ರ ದಶಕದಲ್ಲೇ ಲ್ಯಾಪ್ಟಾಪ್ ಬಳಸುತ್ತಿದ್ದರು ಎಂದು ಹಿರಿಯ ನಟ ವೈಜನಾಥ್ ಬಿರಾದಾರ್ ಹೇಳಿದ್ದಾರೆ. ಶಂಕರ್ ನಾಗ್ ಜೊತೆ ಮೂರು ಸಿನಿಮಾಗಳಲ್ಲಿ ಬಿರಾದಾರ್ ನಟಿಸಿದ್ದರು. ‘ಜಯಭೇರಿ’, ‘ಆಟ ಬೊಂಬಾಟ’ ಮತ್ತು ‘ಪುಂಡ ಪ್ರಚಂಡ’ ಚಿತ್ರಗಳಲ್ಲಿ ಶಂಕರ್ ನಾಗ್ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಬಿರಾದಾರ್ಗೆ ಸಿಕ್ಕಿತ್ತು. ಆವೇಳೆ ತಾವು ಕಂಡಿದ್ದನ್ನು ಅವರೀಗ ನೆನಪಿಸಿಕೊಂಡಿದ್ದಾರೆ.
‘ಶಂಕರ್ನಾಗ್ ಅವರು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತಿದ್ದರು. ಆ ಕಾಲದಲ್ಲೇ ಅವರು ಲ್ಯಾಪ್ಟಾಪ್ ಇಟ್ಟುಕೊಂಡಿದ್ದರು. ಪಾತ್ರ ಮುಗಿಯಿತು ಎಂದ ತಕ್ಷಣ ಅದರ ಮುಂದೆ ಕೂರುತ್ತಿದ್ದರು. ‘ಆಟ ಬೊಂಬಾಟ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಅದು ಏನು ಎಂದು ನಿರ್ದೇಶಕ ಗೌರಿ ಶಂಕರ್ ಕೇಳಿದರು. ಅದು ಲ್ಯಾಪ್ ಟಾಪ್ ಎಂದು ಹೇಳಿದ್ದಲ್ಲದೇ ಅದರ ಬಗ್ಗೆ ನಿರ್ದೇಶಕರಿಗೆ ಶಂಕರ್ ನಾಗ್ ವಿವರಿಸಿದ್ದರು’ ಎಂದಿದ್ದಾರೆ ಬಿರಾದಾರ್.
ಇದನ್ನೂ ಓದಿ:
‘ಶಂಕರ್ ನಾಗ್ ನೀವು ನಮ್ಮನ್ನು ಬಹುಬೇಗ ಬಿಟ್ಟು ಹೋದಿರಿ’; ಬಾಲಿವುಡ್ ನಟಿ ಭಾವುಕ ನುಡಿ
ಸಂಚಾರಿ ವಿಜಯ್ ರೀತಿಯಲ್ಲೇ ಅಪಘಾತದಲ್ಲಿ ಮೃತಪಟ್ಟ ಸ್ಯಾಂಡಲ್ವುಡ್ ಕಲಾವಿದರಿವರು