‘ಅದೆಲ್ಲ ಈಗ ಜೀವನದಲ್ಲಿ ಇಲ್ಲ; ತ್ಯಾಗ ಮಾಡಿದ್ದೇನೆ’: ಮದುವೆ ಬಳಿಕ ವಸಿಷ್ಠ ಸಿಂಹ ಮಾತು
ಮದುವೆ ಬಳಿಕ ಎಲ್ಲರ ಜೀವನದಲ್ಲೂ ಬದಲಾವಣೆ ಆಗುತ್ತದೆ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಪ್ರೀತಿಸಿ ಮದುವೆ ಆದ ಬಳಿಕ ಅವರ ಜೀವನದಲ್ಲೂ ಕೆಲವು ಬದಲಾವಣೆ ಆಗಿವೆ. ಆ ಬಗ್ಗೆ ವಸಿಷ್ಠ ಸಿಂಹ ಮಾತನಾಡಿದ್ದಾರೆ. ‘ಲವ್ ಲಿ’ ಸಿನಿಮಾದ ಕುರಿತು ಮಾತುಕಥೆಗೆ ಸಿಕ್ಕಾಗ ವೈಯಕ್ತಿಕ ಜೀವನದ ಬಗ್ಗೆಯೂ ಕೆಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ (Haripriya) ಅವರು ಪರಸ್ಪರ ಪ್ರೀತಿ ಮದುವೆ ಆದರು. ಇಬ್ಬರೂ ಕೂಡ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ‘ಲವ್ ಲಿ’ ಸಿನಿಮಾದಲ್ಲಿ ವಸಿಷ್ಠ ಸಿಂಹ ನಟಿಸಿದ್ದು, ಅವರ ಹೊಸ ಹಾಡು ಬಿಡುಗಡೆ ಆಗಿದೆ. ಈ ವೇಳೆ ಸಿನಿಮಾ ಬಗ್ಗೆ ಮಾತನಾಡುತ್ತಲೇ ಅವರು ರಿಯಲ್ ಲೈಫ್ ಬಗ್ಗೆಯೂ ಕೆಲವು ವಿಚಾರ ಹಂಚಿಕೊಂಡಿದ್ದಾರೆ. ಮದುವೆ ನಂತರದ ಜೀವನ ಹೇಗೆ ಇದೆ? ಪ್ರೀತಿಯಲ್ಲಿ ಬಿದ್ದ ಬಳಿಕ ವಸಿಷ್ಠ ಸಿಂಹ (Vasishta Simha) ಅವರು ಏನೆಲ್ಲ ತ್ಯಾಗ ಮಾಡಿದ್ದಾರೆ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ‘ತ್ಯಾಗ ಎಂಬುದು ಎರಡೂ ಕಡೆಯಿಂದ ಆಗುತ್ತದೆ. ಹುಡುಗರ ಆಯಾಮದಿಂದ ನಾನು ಹೇಳಬಹುದು. ಹುಡುಗಿಯ ಕಡೆಯಿಂದ ತ್ಯಾಗ ಇನ್ನೂ ಹೆಚ್ಚಾಗಿ ಇರುತ್ತದೆ. ನಾನು 15 ವರ್ಷಕ್ಕೆ ದುಡಿಯೋಕೆ ಶುರು ಮಾಡಿದೆ. ಹೆಚ್ಚಾಗಿ ನಾನು ಒಬ್ಬನೇ ಬದುಕಿದ್ದು. ಬ್ಯಾಚುಲರ್ ಜೀವನದಲ್ಲಿ ನಾವೆಲ್ಲ ಹುಡುಗರನ್ನು ಗುಡ್ಡೆ ಹಾಕಿಕೊಂಡು ಆರಾಮಾಗಿ ತಿರುಗಿಕೊಂಡು ಇದ್ದೆವು. ಇಂಥ ವ್ಯಕ್ತಿಯ ಜೀವನದಲ್ಲಿ ಪ್ರೀತಿ ಆದಾಗ, ಪ್ರೀತಿಸಿದ ವ್ಯಕ್ತಿ ತುಂಬ ಶಿಸ್ತಿನವರಾದಾಗ ನಮ್ಮ ಜೀವನದಲ್ಲಿ ಸಾಕಷ್ಟು ಬದಲಾಗುತ್ತದೆ. ಕೆಲಸ ಇಲ್ಲದೇ ಇದ್ದಾಗ ಮಲಗಿಕೊಂಡೇ ಇರುವುದು, ಸ್ನೇಹಿತರ ಜೊತೆ ತಿರುಗುವುದು, ರಾತ್ರಿ ಗಾಡಿ ಓಡಿಸೋದು.. ಇಂಥದ್ದೆಲ್ಲ ಈಗ ನನ್ನ ಜೀವನದಲ್ಲಿ ಇಲ್ಲವೇ ಇಲ್ಲ. ಅದೇ ರೀತಿ ಹೆಣ್ಮಕ್ಕಳು ತಾಯಿಯ ಮನೆ ಬಿಟ್ಟು ಬರುವುದಕ್ಕೆ ಸಮಾನವಾದ ತ್ಯಾಗ ಬೇರೊಂದಿಲ್ಲ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು’ ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.