Loading video

ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿ ಕ್ರೇಝ್: ಕರಾಚಿಯಲ್ಲಿ ಮೊಳಗಿದ RCB ಹರ್ಷೋದ್ಘಾರ

|

Updated on: Feb 15, 2025 | 3:10 PM

Virat Kohli Fans In Pakistan: ಪಾಕಿಸ್ತಾನದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕ್ರೇಝ್ ಜೋರಾಗಿದೆ. ಇದಕ್ಕೆ ಸಾಕ್ಷಿಯಾಗಿ ಇದೀಗ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪಾಕಿಸ್ತಾನದ ಅಭಿಮಾನಿಗಳು ವಿರಾಟ್ ಕೊಹ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಜೈಕಾರ ಹಾಕುತ್ತಿರುವುದು ಕಾಣಬಹುದು.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಅಭಿಮಾನಿಗಳಿರುವುದು ಗೊತ್ತೇ ಇದೆ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಲ್ಲೂ ಸಾಕಷ್ಟು ಅಭಿಮಾನಿಗಳಿರುವುದು ವಿಶೇಷ. ಇದಕ್ಕೆ ಸಾಕ್ಷಿ ಪಾಕಿಸ್ತಾನ್-ನ್ಯೂಝಿಲೆಂಡ್ ನಡುವಣ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಹೆಸರು ಕೇಳಿ ಬಂದಿರುವುದು.

ಕರಾಚಿಯ ನ್ಯಾಷನಲ್​ ಸ್ಟೇಡಿಯಂ ಬಳಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವಣ ತ್ರಿಕೋನ ಸರಣಿಯ ಫೈನಲ್ ಪಂದ್ಯ ವೀಕ್ಷಿಸಲು ಅಭಿಮಾನಿಗಳು ನೆರೆದಿದ್ದರು. ಈ ವೇಳೆ ಮಾಧ್ಯಮವೊಂದು ಪಾಕ್ ಕ್ರಿಕೆಟ್ ಪ್ರಿಯರಲ್ಲಿ ತಮ್ಮ ನೆಚ್ಚಿನ ಆಟಗಾರರ ಬಗ್ಗೆ ಕೇಳಿದ್ದಾರೆ.

ಇದಕ್ಕೆ ಅಲ್ಲಿದ್ದ ಗುಂಪಿನಿಂದ ಕೇಳಿ ಬಂದ ಉತ್ತರ ವಿರಾಟ್ ಕೊಹ್ಲಿ. ಅಷ್ಟೇ ಅಲ್ಲದೆ ನಾವು ಆರ್​ಸಿಬಿ ತಂಡದ ಅಭಿಮಾನಿಗಳು ಎಂದು ಸಹ ಹೇಳಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬ ಆರ್​ಸಿಬಿ ಜೆರ್ಸಿಯಲ್ಲೂ ಕಾಣಿಸಿಕೊಂಡಿರುವುದು ವಿಶೇಷ. ಇದೀಗ ಪಾಕಿಸ್ತಾನದಲ್ಲಿನ ವಿರಾಟ್ ಕೊಹ್ಲಿ ಅಭಿಮಾನಿಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಂದಹಾಗೆ ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳು ರಾರಾಜಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲೂ ಕಿಂಗ್ ಕೊಹ್ಲಿ ಅಭಿಮಾನಿಗಳು ಪೋಸ್ಟರ್​ಗಳನ್ನು ಹಿಡಿದುಕೊಂಡಿದ್ದರು.

ಅಲ್ಲದೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ವೇಳೆ ಪಾಕ್ ತಂಡದ ಜೆರ್ಸಿಯಲ್ಲಿ ವಿರಾಟ್ ಕೊಹ್ಲಿಯ ಹೆಸರನ್ನು ಬರೆಸಿಕೊಂಡಿರುವ ಅನೇಕ ಅಭಿಮಾನಿಗಳು ಕಂಡು ಬಂದಿದ್ದರು. ಇದೀಗ ಮತ್ತೊಮ್ಮೆ ಪಾಕಿಸ್ತಾನ್ ತಂಡದ ಪಂದ್ಯದ ವೇಳೆ ವಿರಾಟ್ ಕೊಹ್ಲಿಯ ಹೆಸರು ಮೊಳಗಿರುವುದು ವಿಶೇಷ.