VIDEO: ಇದೆಂಥ ಕೀಳುಮಟ್ಟದ ವರ್ತನೆ… ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ
IPL 2025 RCB vs PBKS: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ಗೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 101 ರನ್ಗಳಿಸಿದರೆ, ಆರ್ಸಿಬಿ 10 ಓವರ್ಗಳಲ್ಲಿ ಈ ಗುರಿಯನ್ನು ಚೇಸ್ ಮಾಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಫೈನಲ್ಗೆ ಪ್ರವೇಶಿಸಿದೆ. ಮುಲ್ಲನ್ಪುರ್ನ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಆರ್ಸಿಬಿ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಪಂಜಾಬ್ ಪಡೆ 60 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಪಂಜಾಬ್ ಕಿಂಗ್ಸ್ ಇಂಪ್ಯಾಕ್ಟ್ ಸಬ್ ಆಗಿ ಮುಶೀರ್ ಖಾನ್ ಅವರನ್ನು ಕಣಕ್ಕಿಳಿಸಿದ್ದರು. ವಿಶೇಷ ಎಂದರೆ ಇದು ಮುಶೀರ್ ಅವರ ಚೊಚ್ಚಲ ಐಪಿಎಲ್ ಪಂದ್ಯವಾಗಿತ್ತು. ಇತ್ತ ಮೊದಲ ಪಂದ್ಯವಾಡಲು ಕ್ರೀಸ್ಗೆ ಆಗಮಿಸಿದ ಯುವ ಆಟಗಾರನನ್ನು ವಿರಾಟ್ ಕೊಹ್ಲಿ ಅಪಹಾಸ್ಯ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮುಶೀರ್ ಖಾನ್ ಬ್ಯಾಟಿಂಗ್ಗೆ ಸಜ್ಜಾಗುತ್ತಿದ್ದರೆ, ಅತ್ತ ಸ್ಲಿಪ್ನಲ್ಲಿದ್ದ ವಿರಾಟ್ ಕೊಹ್ಲಿ ಇವನು ನೀರು ಕೊಡುವವನು ಎಂದು ಹೀಯಾಳಿಸಿದ್ದಾರೆ. ಇತರೆ ಆಟಗಾರರನ್ನು ಕರೆದು ಕೊಹ್ಲಿ ನೀರು ಕೊಡುವವನು ಎಂದು ಅಪಹಾಸ್ಯ ಮಾಡುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮುಶೀರ್ ಖಾನ್ ಕಳೆದ 14 ಪಂದ್ಯಗಳಲ್ಲಿ ಇಂಪ್ಯಾಕ್ಟ್ ಸಬ್ ಲಿಸ್ಟ್ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್ನ ಆಟಗಾರರಿಗೆ ನೀರು ತಂದುಕೊಡುತ್ತಿದ್ದರು. ಇದನ್ನೇ ಪ್ರಸ್ತಾಪಿಸಿ ವಿರಾಟ್ ಕೊಹ್ಲಿ, ಮುಶೀರ್ ಅವರನ್ನು ಹೀಯಾಳಿಸಿದ್ದಾರೆ.
ವಿರಾಟ್ ಕೊಹ್ಲಿಯ ಈ ವರ್ತನೆಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಕ್ರಿಕೆಟ್ ಅಂಗಳದ ಕಿಂಗ್ ಎನಿಸಿಕೊಂಡವನಿಂದ ಮೂಡಿಬಂದ ಈ ವರ್ತನೆ ನಿಜಕ್ಕೂ ಅಸಹ್ಯ ಎಂದು ಅನೇಕರು ಹೇಳಿದರೆ, ಇನ್ನೂ ಕೆಲವರು ಎಲ್ಲರೂ ಬಾಲ್ ಬಾಯ್, ವಾಟರ್ ಬಾಯ್ ಆಗಿಯೇ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಕೆಲವರು ಬಾಲ್ ಬಾಯ್ ಆಗಿದ್ದ ಸಚಿನ್ ತೆಂಡೂಲ್ಕರ್ ಅವರ ಉದಾಹರಣೆಯನ್ನು ನೀಡಿ ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮತ್ತೆ ಕೆಲವರು ವಿರಾಟ್ ಕೊಹ್ಲಿಯ ಫ್ಯಾನ್ಸ್ ಎಂದಿರುವ ಮುಶೀರ್ ಖಾನ್ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಚೊಚ್ಚಲ ಪಂದ್ಯವಾಡಲು ಆಗಮಿಸಿದ ಯುವ ಆಟಗಾರನನ್ನು ವಿನಾಕಾರಣ ಅಪಹಾಸ್ಯ ಮಾಡುವ ಮೂಲಕ ವಿರಾಟ್ ಕೊಹ್ಲಿ ತಮ್ಮ ಘನತೆಯನ್ನು ಕುಗ್ಗಿಸಿಕೊಂಡಿರುವುದಂತು ಸುಳ್ಳಲ್ಲ. ಇಂತಹ ಕೀಳು ವರ್ತನೆ ಕ್ರಿಕೆಟ್ ಅಂಗಳದ ಕಿಂಗ್ ಎನಿಸಿಕೊಂಡವರಿಗೆ ಶೋಭೆಯಲ್ಲ.