VIDEO: ರನೌಟ್​ಗೆ ಅಪೀಲ್​ ಮಾಡುತ್ತಿದ್ದಂತೆ, ಕೋಪಗೊಂಡ ವಿರಾಟ್ ಕೊಹ್ಲಿ

Updated on: May 28, 2025 | 8:06 AM

IPL 2025 RCB vs LSG: ಇಂಡಿಯನ್ ಪ್ರೀಮಿಯರ್ ಲೀಗ್​ನ 70ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 227 ರನ್ ಕಲೆಹಾಕಿತು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.4 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಆರ್​ಸಿಬಿ 6 ವಿಕೆಟ್​ಗಳ ಜಯ ಸಾಧಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಲ್​ಎಸ್​ಜಿ 20 ಓವರ್​ಗಳಲ್ಲಿ 227 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ (54) ಅರ್ಧಶತಕ ಬಾರಿಸಿದ್ದರು. ಆ ಬಳಿಕ ಬಂದ ಜಿತೇಶ್ ಶರ್ಮಾ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಇದಾಗ್ಯೂ ಕೊನೆಯ 3 ಓವರ್​ಗಳಲ್ಲಿ ಆರ್​ಸಿಬಿ ತಂಡಕ್ಕೆ 28 ರನ್​ಗಳ ಅವಶ್ಯಕತೆಯಿತ್ತು. ಇದರ ನಡುವೆ ದಿಗ್ವೇಶ್ ರಾಥಿ 17ನೇ ಓವರ್​ನ ಕೊನೆಯ ಎಸೆತದಲ್ಲಿ ಜಿತೇಶ್ ಶರ್ಮಾ ಅವರನ್ನು ಮಂಕಡ್ ರನೌಟ್ ಮಾಡಿದ್ದರು. ಚೆಂಡೆಸೆಯುವ ಮುನ್ನ ಜಿತೇಶ್ ಕ್ರೀಸ್ ಬಿಟ್ಟಿದ್ದರಿಂದ ದಿಗ್ವೇಶ್ ಬೌಲಿಂಗ್ ಮಾಡದೇ ವಿಕೆಟ್​ನ ಬೇಲ್ಸ್ ಎಗರಿಸಿದ್ದರು.

ಅಲ್ಲದೆ ರನೌಟ್​ಗಾಗಿ ಫೀಲ್ಡ್ ಅಂಪೈರ್​ನಲ್ಲಿ ಮನವಿ ಮಾಡಿದ್ದರು. ಇತ್ತ ದಿಗ್ವೇಶ್ ರನೌಟ್​ಗಾಗಿ ಮನವಿ ಮಾಡುತ್ತಿದ್ದಂತೆ, ಅತ್ತ ಡ್ರೆಸ್ಸಿಂಗ್ ರೂಮ್​ನಲ್ಲಿದ್ದ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಆಕ್ರೋಶದ ಸನ್ನಿವೇಶ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ದಿಗ್ವೇಶ್ ಅವರ ಮನವಿಯನ್ನು ಪರಿಶೀಲಿಸಿದ ಮೂರನೇ ಅಂಪೈರ್ ನಾಟೌಟ್ ನೀಡಿದ್ದರು. ಇದಕ್ಕೆ ಮುಖ್ಯ ಕಾರಣ ಅವರು ಬೌಲಿಂಗ್ ಆ್ಯಕ್ಷನ್​ನತ್ತ ದಾಪುಗಾಲಿಟ್ಟಿರುವುದು. ಅಂದರೆ ಮುಂಗಾಲನ್ನು ಕ್ರೀಸ್​ ಮೇಲಿಟ್ಟು ಬೌಲಿಂಗ್ ಆ್ಯಕ್ಷನ್ ತೋರಿಸಿ ಮಂಕಂಡಿಂಗ್ ರನೌಟ್ ಮಾಡುವಂತಿಲ್ಲ. ಇತ್ತ ದಿಗ್ವೇಶ್ ರಾಥಿ ಬೌಲಿಂಗ್​ಗೆ ದಾಪುಗಾಲಿಟ್ಟಿದ್ದರಿಂದ ಮೂರನೇ ಅಂಪೈರ್ ಅದನ್ನು ನಾಟೌಟ್ ಎಂದು ಪರಿಣಿಸಿದರು.

ಅದರಂತೆ ಕೊನೆಯ ತಂದಲ್ಲಿ ಸಿಕ್ಕ ಜೀವದಾನವನ್ನು ಬಳಸಿಕೊಂಡ ಜಿತೇಶ್ ಶರ್ಮಾ ಅಜೇಯ 85 ರನ್ ಬಾರಿಸಿ ಆರ್​ಸಿಬಿ ತಂಡಕ್ಕೆ 6 ವಿಕೆಟ್​ಗಳ ಜಯ ತಂದುಕೊಟ್ಟರು.