ಇದಪ್ಪಾ ಕ್ರೇಝ್ ಅಂದ್ರೆ… ವಿರಾಟ್ ಕೊಹ್ಲಿ ಅಭಿಮಾನಿಗಳಿಂದ ತುಂಬಿ ತುಳುಕಿದ ಗೌತಮ್ ಗಂಭೀರ್ ಸ್ಟ್ಯಾಂಡ್
Virat Kohli Ranji Trophy: ವಿರಾಟ್ ಕೊಹ್ಲಿ 12 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ. ಇದಕ್ಕೂ ಮುನ್ನ ಕೊಹ್ಲಿ ದೆಹಲಿ ಪರ ಪಂದ್ಯವಾಡಿದ್ದು 2012 ರಲ್ಲಿ. ಉತ್ತರ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಕೊಹ್ಲಿ ಮೊದಲ ಇನಿಂಗ್ಸ್ನಲ್ಲಿ 14 ಮತ್ತು ದ್ವಿತೀಯ ಇನಿಂಗ್ಸ್ನಲ್ಲಿ 43 ರನ್ ಬಾರಿಸಿದ್ದರು. ಇದಾದ ಬಳಿಕ ಅವರು ಒಮ್ಮೆಯೂ ರಣಜಿ ಪಂದ್ಯವಾಡಿರಲಿಲ್ಲ.
ಬರೋಬ್ಬರಿ 12 ವರ್ಷಗಳ ಬಳಿಕ ರಣಜಿ ಕ್ರಿಕೆಟ್ಗೆ ಮರಳಿರುವ ವಿರಾಟ್ ಕೊಹ್ಲಿಗೆ ಭವ್ಯ ಸ್ವಾಗತ ಸಿಕ್ಕಿದೆ. ಅದು ಕೂಡ ಸ್ಟೇಡಿಯಂನಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬುವ ಮೂಲಕ ಎಂಬುದು ವಿಶೇಷ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೆಹಲಿ ಪರ ಕಣಕ್ಕಿಳಿದಿದ್ದಾರೆ.
ಈ ಪಂದ್ಯದಲ್ಲಿ ಕೊಹ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳ ಜನಸಾಗರ ಅರುಣ್ ಜೇಟ್ಲಿ ಸ್ಟೇಡಿಯಂನತ್ತ ಆಗಮಿಸಿದ್ದರು. ಅದರಲ್ಲೂ ಬುಧವಾರದಿಂದಲೇ ಕಿಂಗ್ ಕೊಹ್ಲಿ ಫ್ಯಾನ್ಸ್ ಕ್ರೀಡಾಂಗಣದತ್ತ ಜಮಾಯಿಸಿದ್ದರು.
ಇಂದು ಬೆಳಿಗ್ಗೆ ಪಂದ್ಯ ಶುರುವಾಗುತ್ತಿದ್ದಂತೆ ಸ್ಟೇಡಿಯಂಗೆ ನುಗ್ಗಿದ ಅಭಿಮಾನಿಗಳನ್ನು ನಿಯಂತ್ರಿಸಲು ಸಿಬ್ಬಂದಿಗಳು ಹರಸಾಹಸ ಪಟ್ಟರು. ಇತ್ತ ಗೌತಮ್ ಗಂಭೀರ್ ಹೆಸರಿನಲ್ಲಿರುವ ಸ್ಟ್ಯಾಂಡ್ ಭರ್ತಿಯಾಗುತ್ತಿದ್ದಂತೆ, ಅತ್ತ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಪೆವಿಲಿಯನ್ ಕೂಡ ತೆರೆಯಲಾಗಿದೆ. ಇದೀಗ ಆ ಸ್ಟ್ಯಾಂಡ್ ಕೂಡ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದೆ.
ಒಟ್ಟಿನಲ್ಲಿ 12 ವರ್ಷಗಳ ಬಳಿಕ ದೆಹಲಿಯಲ್ಲಿ ರಣಜಿ ಪಂದ್ಯವಾಡುತ್ತಿರುವ ವಿರಾಟ್ ಕೊಹ್ಲಿಗೆ ಭರ್ಜರಿ ಸ್ವಾಗತ ಸಿಕ್ಕಿದ್ದು, ಇದರೊಂದಿಗೆ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ದೆಹಲಿ ತಂಡವು ಬೌಲಿಂಗ್ ಆಯ್ದುಕೊಂಡಿದ್ದು, ಅದರಂತೆ ಇದೀಗ ರೈಲ್ವೇಸ್ ತಂಡ ಬ್ಯಾಟಿಂಗ್ ಮಾಡುತ್ತಿದೆ. ಮೊದಲ ಇನಿಂಗ್ಸ್ನ 20 ಓವರ್ಗಳ ಮುಕ್ತಾಯದ ವೇಳೆಗೆ ರೈಲ್ವೇಸ್ ತಂಡವು 5 ವಿಕೆಟ್ ಕಳೆದುಕೊಂಡು 65 ರನ್ ಕಲೆಹಾಕಿದೆ.