DC vs GT: 9 ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಸುಂದರ್

Updated on: Apr 08, 2026 | 9:51 PM

Washington Sundar's Maiden IPL Fifty: ಗುಜರಾತ್ ಟೈಟನ್ಸ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ IPL 2026 ರ 14ನೇ ಪಂದ್ಯದಲ್ಲಿ ತಮ್ಮ ವೃತ್ತಿಜೀವನದ ಮೊದಲ ಅರ್ಧಶತಕ (55 ರನ್) ದಾಖಲಿಸಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ವಿರುದ್ಧ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ, ಸುಂದರ್ 9 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿ ಸ್ಫೋಟಕ ಪ್ರದರ್ಶನ ನೀಡಿದರು. ಶುಭಮನ್ ಗಿಲ್ ಜೊತೆ ಶತಕದ ಪಾಲುದಾರಿಕೆ ಹಂಚಿಕೊಂಡು, ತಂಡದ ದೊಡ್ಡ ಮೊತ್ತಕ್ಕೆ ಪ್ರಮುಖ ಕೊಡುಗೆ ನೀಡಿದರು.

ಗುಜರಾತ್ ಟೈಟಾನ್ಸ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಐಪಿಎಲ್ 2026 ರ 14ನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ, ತಮ್ಮ ಒಂಬತ್ತು ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಅರ್ಧಶತಕ ದಾಖಲಿಸಿದರು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಸ್ಫೋಟಕ ಅರ್ಧಶತಕ ಸಿಡಿಸಿದರು. ವಾಸ್ತವವಾಗಿ 2017 ರಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಸುಂದರ್ ಎಂದಿಗೂ 50 ರನ್‌ಗಳ ಗಡಿಯನ್ನು ತಲುಪಿರಲಿಲ್ಲ. ಆದರೀಗ ಆ ಬರವನ್ನು ನೀಗಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ವಾಷಿಂಗ್ಟನ್ ಸುಂದರ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ತಂಡವು ದೊಡ್ಡ ಮೊತ್ತವನ್ನು ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಸುಂದರ್ 33 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಿತ 55 ರನ್ ಗಳಿಸಿದರು. ತಂಡವು 79 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ಬ್ಯಾಟಿಂಗ್​ಗೆ ಬಂದ ಸುಂದರ್, ನಾಯಕ ಶುಭಮನ್ ಗಿಲ್ ಅವರೊಂದಿಗೆ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು.

2017 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ವಾಷಿಂಗ್ಟನ್ ಸುಂದರ್ ತಮ್ಮ ಆಫ್-ಸ್ಪಿನ್ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದರು. ಅವರು ಬ್ಯಾಟಿಂಗ್‌ನಲ್ಲಿ ಹಲವಾರು ಉಪಯುಕ್ತ ಇನ್ನಿಂಗ್ಸ್‌ಗಳನ್ನು ಆಡಿದ್ದರು, ಆದರೆ ಒಮ್ಮೆಯೂ ಅರ್ಧಶತಕ ಗಳಿಸಿರಲಿಲ್ಲ. ಇದೀಗ ಅರ್ಧಶತಕಗಳ ಬರ ಇಂದು ಕೊನೆಗೊಂಡಿದೆ. ಕೇವಲ 17 ವರ್ಷ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಸುಂದರ್ ಇಲ್ಲಿಯವರೆಗೆ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ನಾಲ್ಕು ವಿಭಿನ್ನ ತಂಡಗಳಿ ಪರ ಆಡಿದ್ದು ಒಟ್ಟು 69 ಪಂದ್ಯಗಳನ್ನು ಆಡಿದ್ದಾರೆ. ಈ 69 ಪಂದ್ಯಗಳಲ್ಲಿ ಒಟ್ಟು 588 ರನ್ ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 08, 2026 09:51 PM
Follow Us