ವಿಡಿಯೋ ನೋಡಿ: ಮೋದಿ ಮತ್ತೊಮ್ಮೆ ಪ್ರಧಾನಿ ಆಗಲೆಂದು ಮಹದೇಶ್ವರ ಬೆಟ್ಟಕ್ಕೆ 102 ವರ್ಷದ ವೃದ್ಧೆ ಪಾದಯಾತ್ರೆ
Male Mahadeshwara Hills: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಅನೇಕರು ನರೇಂದ್ರ ಮೋದಿ ಅವರೇ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂದು ಸಾಮಾಜಿಕ ಜಾಲತಾಣಗಳ ಮೂಲಕ ಹಾರೈಸುವುದು ಕಂಡುಬರುತ್ತಿದೆ. ಈ ಮಧ್ಯೆ 102 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಮತ್ತು ದೇಶದ ರೈತರಿಗೆ ಒಳ್ಳೆಯದಾಗಬೇಕೆಂದು ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ವೃದ್ಧೆಯ ಪಾದಯಾತ್ರೆಯ ವಿಡಿಯೋ ಇಲ್ಲಿದೆ.
ಚಾಮರಾಜನಗರ, ಮಾರ್ಚ್ 7: ನರೇಂದ್ರ ಮೋದಿ (Narendra Modi) ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕೆಂದು ಹಾರೈಸಿ 102 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದ್ದಾರೆ. ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ (Male Mahadeshwara Hills) ಮಾದಪ್ಪನ ದರ್ಶನಕ್ಕೆ (Male Mahadeshwara Temple) 18 ಕಿಲೋಮೀಟರ್ ಕಾಲ್ನಡಿಗೆ ಮೂಲಕ ಶತಾಯುಷಿ ಅಜ್ಜಿ ಕ್ರಮಿಸಿದ್ದಾರೆ. ಹೀಗೆ ಮೋದಿಗಾಗಿ ಪಾದಯಾತ್ರೆ ನಡೆಸಿದ ಅಜ್ಜಿಯನ್ನು ತುಮಕೂರು ಜಿಲ್ಲೆ ತಿಪಟೂರು ಮೂಲದ ಪಾರ್ವತಮ್ಮ ಎಂದು ಗುರುತಿಸಲಾಗಿದೆ.
ದೇಶಕ್ಕೆ ಒಳ್ಳೆಯದಾಗಬೇಕು. ರೈತರಿಗೆ ಒಳ್ಳೆಯದಾಗಬೇಕು. ಮಳೆ, ಬೆಳೆ ಚೆನ್ನಾಗಿ ಆಗಬೇಕು. ಹಾಗೆ ಆದರೆ ಅಲ್ಲವೇ ರೈತರಿಗೆ ಒಳಿತಾಗುವುದು? ಅದೇ ರೀತಿ ಕಾಡು ಪ್ರಾಣಿಗಳಿಗೂ ಒಳ್ಳೆಯದಾಗಬೇಕು. ಅವುಗಳಿಗೆ ಕುಡಿಯುವ ನೀರು ದೊರೆಯುವಂತಾಗಬೇಕು. ಈ ಎಲ್ಲ ಬೇಡಿಕೆಗಳನ್ನು ದೇವರ ಮುಂದಿಟ್ಟುಕೊಂಡು ಮಹದೇಶ್ವರನ ದರ್ಶನಕ್ಕೆ ಬರುತ್ತಿದ್ದೇನೆ ಎಂದು ಪಾರ್ವತಮ್ಮ ಹೇಳಿದ್ದಾರೆ.
ಮೋದಿ ಯಾಕೆ ಪ್ರಧಾನಿಯಾಗಬೇಕು? ಅಜ್ಜಿ ಹೇಳಿದ್ದಿಷ್ಟು…
ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಅಜ್ಜಿ ಹೇಳುತ್ತಿದ್ದಂತೆಯೇ ಜತೆಗೆ ಪಾದಯಾತ್ರೆ ಮಾಡುತ್ತಿದ್ದವರು, ‘ಅವರು ಯಾಕೆ ಪಿಎಂ ಆಗಬೇಕು?’ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ, ದೇಶಕ್ಕೆ ಒಳ್ಳೆಯದಾಗಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ವೃದ್ಧೆ ಹೇಳಿದ್ದಾರೆ. ನಿಮ್ಮ ಆಶೀರ್ವಾದ ಇದ್ದರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಿಯೇ ಆಗುತ್ತಾರೆ ಎಂದು ಸ್ಥಳದಲ್ಲಿ ಇದ್ದವರು ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ
ನಿಮ್ಮ ಆಶೀರ್ವಾದ ನಮ್ಮ ಮೇಲೂ ಇರಲಿ ಅಜ್ಜಿ ಎಂದು ಸಹ ಯಾತ್ರಿಗಳು ಅಜ್ಜಿಯಲ್ಲಿ ಬೇಡಿಕೊಂಡಿದ್ದಾರೆ. ಅಲ್ಲದೆ, ವೃದ್ಧೆಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಿಪಟೂರು ಮೂಲದ ಪಾರ್ವತಮ್ಮ ಸುಮಾರು 5-6 ವರ್ಷಗಳಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುತ್ತಿದ್ದಾರಂತೆ.
ವೃದ್ಧೆಯ ಸಾಮಾಜಿಕ ಕಾಳಜಿ, ಮೋದಿ ಅಭಿಮಾನ ಹಾಗೂ ಮಾದಪ್ಪನ ಕುರಿತ ಭಕ್ತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ