ಹಿಂದೆ ನಡೆದುಹೋದ ಸ್ಥಿತಿಯನ್ನು ಬದಲಾಯಿಸಲಾರೆವು, ಆದರೆ ಭವಿಷ್ಯದಲ್ಲಿ ಆಗಬಹುದಾದುದನ್ನು ಬದಲಿಸಬಹುದು: ಡಾ ಸೌಜನ್ಯ ವಶಿಷ್ಠ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 06, 2021 | 8:49 PM

ಹಿಂದೆ ನಡೆದುಹೋಗಿರುವ ಕೆಟ್ಟ ಘಟನೆಗಳ ಬಗ್ಗೆ ಯೋಚನೆ ಬೇಡ, ಯಾಕೆಂದರೆ, ಅಗಿ ಹೋಗಿರುವುದನ್ನು ನಾವು ಬದಲಾಯಿಸಲಾರೆವು ಆದರೆ ಮುಂದಾಗಲಿಕ್ಕಿರುವುದನ್ನು ಖಂಡಿತವಾಗಿಯೂ ಬದಲಾಯಿಸಬಹುದು.

ಉತ್ತರ ಕರ್ನಾಟಕದ ಕಡೆ ಹುಚ್ಚು ಖೋಡಿ ಮನಸ್ಸು ಅಂತ ಹೇಳುತ್ತಿರುತ್ತಾರೆ, ಮನಸ್ಸಿಗೆ ಲಂಗು ಲಗಾಮಿಲ್ಲ ಅಂತ ಹೇಳಲು ಹಾಗನ್ನುವುದುಂಟು. ಖ್ಯಾತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಅವರು ಇಂದು ಮನಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ಅನ್ನುವ ಬಗ್ಗೆ ಮಾತಾಡಿದ್ದಾರೆ. ನಮ್ಮ ದೇಹದ ಮೇಲ್ಭಾಗದಲ್ಲಿರುವ ಮೆದುಳಿನ ಕೆಲಸವೆಂದರೆ ಯೋಚನೆ ಮಾಡುವುದು. ನಾವು ಯಾವುದೋ ಕೆಲಸದಲ್ಲಿ ಮಗ್ನರಾಗಿದ್ದಾಗಲೂ ಮೆದುಳು ಏನನ್ನಾದರೂ ಯೋಚಿಸುರುತ್ತದೆ. ನಾವು ನಿದ್ರೆಗೆ ಜಾರಿದಾಗಲೇ ಅದಕ್ಕೂ ವಿಶ್ರಾಂತಿ. ಆದರೆ ನಮಗೆ ಕನಸುಗಳು ಬೀಳುತ್ತವಲ್ಲ ಅದೂ ಸಹ ಸುಪ್ತ ಮನಸ್ಸಿನ ಕೆಲಸವೇ ಅಂತ ಡಾ ಸೌಜನ್ಯ ಹೇಳುತ್ತಾರೆ.

ಯೋಚನೆ ಮಾಡುವ ಕೆಲಸ ಮೆದುಳಿನದಾದರೂ ಅದನ್ನು ಅಂದರೆ ಅದರಲ್ಲಿ ಹುಟ್ಟುವ ಯೋಚನೆಗಳ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನ ನಮ್ಮಿಂದಾಗಬೇಕು. ನಮ್ಮ ಯೋಚನೆಗಳು ಕ್ರಮಬದ್ಧವಾಗಿರಬೇಕು ಅಂತ ಸೌಜನ್ಯ ಹೇಳುತ್ತಾರೆ. ಯಾಕೆಂದರೆ ನಾವು ಫೋಕಸ್ ಮಾಡುವ ವಿಷಯದ ಮೇಲೆಯೇ ಮನಸ್ಸು ಸಹ ಯೋಚನೆ ಮಾಡುತ್ತದೆ. ಹಾಗಾಗಿ, ನಾವು ಫೋಕಸ್ ಮಾಡುವ ವಿಷಯದ ಬಗ್ಗೆ ಎಚ್ಚರವಿರಬೇಕು.

ಹಿಂದೆ ನಡೆದುಹೋಗಿರುವ ಕೆಟ್ಟ ಘಟನೆಗಳ ಬಗ್ಗೆ ಯೋಚನೆ ಬೇಡ, ಯಾಕೆಂದರೆ, ಅಗಿ ಹೋಗಿರುವುದನ್ನು ನಾವು ಬದಲಾಯಿಸಲಾರೆವು ಆದರೆ ಮುಂದಾಗಲಿಕ್ಕಿರುವುದನ್ನು ಖಂಡಿತವಾಗಿಯೂ ಬದಲಾಯಿಸಬಹುದು. ನಾವು ವರ್ತಮಾನದಲ್ಲಿ ಜೀವಿಸಬೇಕು, ಭೂತಕಾಲದಲ್ಲಲ್ಲ ಎಂದು ಸೌಜನ್ಯ ಹೇಳುತ್ತಾರೆ.

ನಮ್ಮ ಪ್ರತಿ ಅಲೋಚನೆ ಒಂದು ವೈಬ್ರೇಷನ್ ಇರುತ್ತದೆ, ಒಳ್ಳೆಯದನ್ನು ಯೋಚನೆ ಮಾಡಿದರೆ ಮನಸ್ಸು ಕೂಡ ಪ್ರಫುಲ್ಲವಾಗಿರುತ್ತದೆ. ನಮ್ಮ ವ್ಯಕ್ತಿತ್ವವು ನಮ್ಮ ಅಲೋಚನೆಗಳಲ್ಲಿ ಪ್ರತಿಬಿಂಬಿಸುತ್ತದೆ, ಹಾಗಾಗಿ ನಾವು ಸಂತೋಷವಾಗಿರುವ ಸಂಕಲ್ಪ ಮಾಡಿಕೊಳ್ಳಬೇಕು.

ಆಲೋಚನೆ ಸಂತೋಷಮಯವಾಗಿದ್ದರೆ, ಬದುಕು ಸಹ ಉಲ್ಲಾಸಕರವಾಗಿರುತ್ತದೆ. ಹಿಂದೆ ಯಾವತ್ತೋ ಮೋಸ ಹೋದ ಬಗ್ಗೆ ವ್ಯಥೆ ಪಡದೆ ಅದರಿಂದ ಕಲಿತ ಪಾಠವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಂತೋಷವಾಗಿರಬೇಕು ಅಂತ ಡಾ ಸೌಜನ್ಯ ಹೇಳುತ್ತಾರೆ.

ಇದನ್ನೂ ಓದಿ:  Viral Video: ಕತ್ತೆಯನ್ನು ಅಪ್ಪಿಕೊಂಡು ಲಾಲಿ ಹಾಡಿ ಮಲಗಿಸಿದ ವ್ಯಕ್ತಿ; ಹೃದಯಸ್ಪರ್ಶಿ ಈ ವಿಡಿಯೋವನ್ನು ನೋಡಿದ್ದೀರಾ?