ಅಪ್ಪುಗೆ ಹೃದಯದಲ್ಲಿ ಏರುಪೇರು ಆದಾಗ ಆಶ್ವಿನಿಯ ಮನಸ್ಥಿತಿ ಹೇಗಿತ್ತು ಅನ್ನೋದನ್ನ ಯೋಚಿಸಬೇಕು: ಶಿವರಾಜಕುಮಾರ್
ಕುಟುಂಬದ ಕಾರ್ಯಕ್ರಮಗಳಲ್ಲಿ ಅಪ್ಪು ತಪ್ಪದೆ ಭಾಗಿಯಾಗುತ್ತಿದ್ದ ಎಂದು ಹೇಳಿದ ಶಿವಣ್ಣ, ಮನೆಗೆ ಬಂದಾಗಲೆಲ್ಲ, ಇದ್ದಿದ್ದನ್ನು ತಿಂದುಕೊಂಡು ಹೋಗುತ್ತಿದ್ದ ಎಂದರು. ತಾವು ಕೊನೆಯ ಬಾರಿ ಅಪ್ಪು ಒಂದಿಗೆ ಮಾತಾಡಿದ್ದು ಭಜರಂಗಿ ಚಿತ್ರದ ಪ್ರೀ-ಲಾಂಚ್ ಕಾರ್ಯಕ್ರಮದಲ್ಲಿ ಎಂದು ಶಿವಣ್ಣ ಹೇಳಿದರು.
ಪುನೀತ್ ರಾಜಕುಮಾರ್ ಅವರು ನಿಧನ ಹೊಂದಿ ಎರಡು ವಾರಗಳಾಗುತ್ತಾ ಬಂದಿದೆ. ಆದರೂ ಅವರಿಗೆ ಸಿಕ್ಕ ಚಿಕಿತ್ಸೆ ಕುರಿತು ಪ್ರಶ್ನೆಗಳು ಏಳುತ್ತಲೇ ಇವೆ. ಅವರನ್ನು ಬೇರೆ ಆಸ್ಪತ್ರೆಗೆ ಕಳಿಸಿದ್ದರೆ, ಉಳಿಯುತ್ತಿದ್ದರು, ಡಾ ರಮಣ ರಾವ್ ಸರಿಯಾಗಿ ತಪಾಸಣೆ ಮಾಡಲಿಲ್ಲ ಮೊದಲಾದ ಸಂದೇಹಗಳು ಈಗಲೂ ಜನರ ಮನಸ್ಸಿನಲ್ಲಿವೆ. ಗುರುವಾರದಂದು ಟಿವಿ9 ಹಿರಿಯ ನಿರೂಪಕ ರಂಗನಾಥ್ ಭಾರದ್ವಾಜ್ ಜೊತೆ ತಮ್ಮ ಮನೆಯಲ್ಲಿ ಮಾತಾಡಿದ ಶಿವರಾಜಕುಮಾರ್ ಅವರು, ಜನ ಹಾಗೆಲ್ಲ ಯೋಚನೆ ಮಾಡುತ್ತಿದ್ದಾರೆ, ಆದರೆ ಆ ಸಂದರ್ಭದಲ್ಲಿ ಅಶ್ವಿನಿ ಅವರಿದ್ದ ಸ್ಥಿತಿಯನ್ನು ಯೋಚಿಸಬೇಕು, ನಾನು ಬ್ಲ್ಯಾಂಕ್ ಆಗಿಬಿಟ್ಟಿದ್ದೆ ಅಂತ ಅವರು ಹೇಳಿದ್ದಾರೆ. ಅಶ್ವಿನಿಗೆ ಆಗ ಕೈಕಾಲುಗಳು ಮರಗಟ್ಟಿದಂತಾಗಿರುತ್ತವೆ. ಜನ ಆರೋಪ ಮಾಡುತ್ತಿರುತ್ತಾರೆ, ತಮ್ಮ ಹೃದಯಗಳಲ್ಲಿ ಇರುವುದನ್ನು ಹೊರಹಾಕುತ್ತಿರುತ್ತಾರೆ, ಆದರೆ, ಏನು ಮಾಡೋದು. ಅಪ್ಪು ಟೈಮ್ ಬಂದುಬಿಟ್ಟಿತ್ತು, ನಿಧಾನಕ್ಕೆ ಜನ ಅರ್ಥಮಾಡಿಕೊಳ್ಳುತ್ತಾರೆ ಅಂತ ಶಿವಣ್ಣ ಹೇಳಿದರು.
ಡಾ ರಮಣ ರಾವ್ ಆವರಿಗೂ ನೋವು ಮರೆಯೋದಿಕ್ಕೆ ಆಗಲ್ಲ. ಅವನನ್ನು ಕಳೆದುಕೊಂಡಿದ್ದು ಭಯಾನಕ ನೋವು. ಆ ನೋವನ್ನು ನಾವು ಮಾತ್ರ ಅಲ್ಲ ಇಡೀ ದೇಶವೇ ಅನುಭವಿಸುತ್ತಿದೆ ಎಂದು ಶಿವಣ್ಣ ಹೇಳಿದರು. ಅಪ್ಪು ತನ್ನ ಬದುಕಿನಲ್ಲಿ ಏನೆಲ್ಲ ಮಾಡಿದ್ದಾನೆ, ಅದು ತನ್ನ ಗಮನಕ್ಕೆ ಬಂದೇ ಇರಲಿಲ್ಲ, ಅವನು ತಾನು ಮಾಡಿದ ಕೆಲಸಗಳ ಬಗ್ಗೆ ಯಾವತ್ತೂ ಹೇಳಿಕೊಂಡವನಲ್ಲ, ಅಂತ ಶಿವಣ್ಣ ಹೇಳಿದರು.
ಆದರೆ ಹೊಸ ವಾಹನ ಕೊಂಡಾಗ ನನಗೆ ಕೂಡಲೇ ತಿಳಿಸುತ್ತಿದ್ದ, ಅದನ್ನು ಓಡಿಸು, ನೀನೇ ಅದನ್ನು ಇಟ್ಟುಕೊಂಡು ಬಿಡು ಅನ್ನುತ್ತಿದ್ದ, ನಾನು ನಿರಾಕರಿಸುತ್ತಿದ್ದೆ, ನಂಗೆ ಬೇಕಾದರೆ ಇಸ್ಕೋತೀನಿ, ನಿನ್ನ ಹತ್ತಿರ ಇದ್ದರೆ ನನ್ನಲಿದ್ದ ಹಾಗೇನೇ ಅಲ್ವಾ ಅನ್ನುತ್ತಿದ್ದೆ,’ ಎಂದು ಶಿವಣ್ಣ ಹೇಳಿದರು.
ಕುಟುಂಬದ ಕಾರ್ಯಕ್ರಮಗಳಲ್ಲಿ ಅಪ್ಪು ತಪ್ಪದೆ ಭಾಗಿಯಾಗುತ್ತಿದ್ದ ಎಂದು ಹೇಳಿದ ಶಿವಣ್ಣ, ಮನೆಗೆ ಬಂದಾಗಲೆಲ್ಲ, ಇದ್ದಿದ್ದನ್ನು ತಿಂದುಕೊಂಡು ಹೋಗುತ್ತಿದ್ದ ಎಂದರು. ತಾವು ಕೊನೆಯ ಬಾರಿ ಅಪ್ಪು ಒಂದಿಗೆ ಮಾತಾಡಿದ್ದು ಭಜರಂಗಿ ಚಿತ್ರದ ಪ್ರೀ-ಲಾಂಚ್ ಕಾರ್ಯಕ್ರಮದಲ್ಲಿ ಎಂದು ಶಿವಣ್ಣ ಹೇಳಿದರು. ಅದಕ್ಕೆ ಮೊದಲು ತಾನು ಮಾಡಿದ್ದ ಡಾಕ್ಯುಮೆಂಟರಿಯ ಬಗ್ಗೆ ಹೇಳೋದಿಕ್ಕೆ ಬಂದಿದ್ದ ಮತ್ತು ನವೆಂಬರ್ 2 ರಂದು ಬಿಡುಗಡೆ ಮಾಡೋದಿದೆ ಬಿಡುವು ಮಾಡಿಕೊಂಡಿರು ಅಂತ ಹೇಳಿದ್ದ ಅಂತ ಶಿವಣ್ಣ ಹೇಳಿದರು.
ತಾನು, ಅಪ್ಪು ಮತ್ತು ವಿಜಯ ಸೇರುಪತಿ ಒಳಗೊಂಡ ಒಂದು ಸಿನಿಮಾ ಮಾಡುವ ನಿರ್ದೇಶಕ ಹರ್ಷ ಅವರ ಯೋಜನೆಯನ್ನು ಅಪ್ಪುಗೆ ಹೇಳಿದಾಗ ಅವನು ಖುಷಿಯಿಂದ ಮಾಡೋಣ ಅಂದಿದ್ದ ಎಂದು ಶಿವಣ್ಣ ಹೇಳಿದರು.
ಶಿವಣ್ಣ ಅವರ ಲುಕ್ಸ್, ನಟನೆ ಬಗ್ಗೆ ಭಾರಿ ಮೆಚ್ಚುಗೆ ಯಿಂದ ಅಪ್ಪು ಮಾತಾಡಿದ್ದ ಕ್ಲಿಪ್ಪಿಂಗ್ ಅನ್ನು ತೋರಿಸಿದಾಗ ಶಿವಣ್ಣ ಭಾವುಕರಾದರು. ಬಜರಂಗಿ ಚಿತ್ರದ ಒಂದು ದೃಶ್ಯದಲ್ಲಿ ತನ್ನ ಅಭಿನಯದ ಬಗ್ಗೆ ಮೆಚ್ಚಿ ಮಾತಾಡುತ್ತಾ ಅದ್ಭುತವಾಗಿ ನಟಿಸಿದ್ದಿಯಾ ಶಿವಣ್ಣ ಆಂತ ಹೇಳಿದ್ದ ಎಂದು ಅವರು ಹೇಳಿದರು.
ಸಿನಿಮಾದ ಕತೆಗೆ ಸಂಬಂಧಿಸಿದ ಅಂಶಗಳನ್ನು ಗುರುತಿಸಿ ಅವನು ಕಾಮೆಂಟ್ ಮಾಡುತ್ತಿದ್ದ, ಆದು ತಮಗೆ ಬಹಳ ಇಷ್ಟವಾಗುತಿತ್ತು ಎಂದು ಶಿವರಾಜಕುಮಾರ್ ಹೇಳಿದರು.
ಮಾತಿನುದ್ದಕ್ಕೂ ಶಿವಣ್ಣ ತಮ್ಮ ಮಗನಂತಿದ್ದ ಸೋದರನನ್ನು ನೆನೆದು ಭಾವುಕರಾಗುತ್ತಿದ್ದರು.
ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ಶೂಟಿಂಗ್ ವಿಡಿಯೋ ವೈರಲ್; ಪುನೀತ್ ನೋಡಿ ಭಾವುಕರಾದ ಫ್ಯಾನ್ಸ್