ಈಶ್ವರಪ್ಪ ಕೆಂಪುಕೋಟೆಯ ಮೇಲೆ ಕೇಸರಿ ಧ್ಜಜ ಹಾರಿಸುತ್ತೇನೆಂದು ಹೇಳುವುದು ದೇಶದ್ರೋಹ ಎಂದರು ಸಿದ್ದರಾಮಯ್ಯ! 

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 16, 2022 | 9:03 PM

ದೇಶದ ರಾಜಧಾನಿ ದೆಹಲಿಯಲ್ಲಿರುವ ಕೆಂಪುಕೋಟೆಯ ಮೇಲೆ ಕೇವಲ ರಾಷ್ಟ್ರಧ್ವಜ ಮಾತ್ರ ಹಾರಬೇಕು, ಬೇರೆ ಯಾವುದೇ ಧ್ವಜ ಅಲ್ಲಿ ಹಾರುವಂತಿಲ್ಲ, ನಮ್ಮ ಗೌರವದ ದ್ಯೋತಕ ಆಗಿರುವ ಕೆಂಪುಕೋಟೆಯ ಮೇಲೆ ಈಶ್ವರಪ್ಪ ಕೇಸರಿ ಧ್ವಜ ಹಾರಿಸುತ್ತೇವೆ ಅನ್ನುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ವಿಧಾನ ಸಭೆ ಹೊರಗೆ ಸಚಿವ ಕೆ ಎಸ್ ಈಶ್ವರಪ್ಪನವರ (KS Eshwarappa) ಮೇಲೆ ಸಂದರ್ಭ ಸಿಕ್ಕಾಗಲೆಲ್ಲ ಹರಿಹಾಯುವ ವಿರೋಧಪಕ್ಷದ ನಾಯಕ (Leader of Opposition) ಸಿದ್ದರಾಮಯ್ಯನವರು (Siddaramaiah) ಬುಧವಾರದಂದು ವಿಧಾನ ಸಭೆಯೊಳಗೂ ಅದನ್ನು ಮುಂದುವರಿಸಿದರು. ಈಶ್ವರಪ್ಪನವರು ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಅಂತ ಹೇಳಿದ್ದಾರೆ ಎಂದು ಪ್ರಸ್ತಾಪಿಸಿದ ಸಿದ್ದರಾಮಯ್ಯನವರು ಆ ಮೂಲಕ ಅವರು ದೇಶದ್ರೋಹದ ಕೆಲಸ ಮಾಡಿದ್ದಾರೆ ಎಂದರು. ರಾಷ್ಟ್ರಧ್ವಜದ ಮಾನ-ಸನ್ಮಾನ, ಗೌರವ-ಆದರದ ಬಗ್ಗೆ ಮಾತಾಡಿದ ಸಿದ್ದರಾಮಯ್ಯ ಅದಕ್ಕೆ ಸಂಬಂಧಿಸಿದ ಕಾನೂನುಗಳನ್ನು ಸದನಕ್ಕೆ ಓದಿ ಹೇಳಿದರು. ದೇಶದ ರಾಜಧಾನಿ ದೆಹಲಿಯಲ್ಲಿರುವ ಕೆಂಪುಕೋಟೆಯ ಮೇಲೆ ಕೇವಲ ರಾಷ್ಟ್ರಧ್ವಜ ಮಾತ್ರ ಹಾರಬೇಕು, ಬೇರೆ ಯಾವುದೇ ಧ್ವಜ ಅಲ್ಲಿ ಹಾರುವಂತಿಲ್ಲ, ನಮ್ಮ ಗೌರವದ ದ್ಯೋತಕ ಆಗಿರುವ ಕೆಂಪುಕೋಟೆಯ ಮೇಲೆ ಈಶ್ವರಪ್ಪ ಕೇಸರಿ ಧ್ವಜ ಹಾರಿಸುತ್ತೇವೆ ಅನ್ನುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಫ್ಲ್ಯಾಗ್ ಕೋಡ್ ಆಫ್ ಇಂಡಿಯಾ 2002 (Flag Code of India 2002) ಮತ್ತು ದಿ ಪ್ರಿವೆನ್ಷನ್ ಆಫ್ ಇನ್ ಸಲ್ಟ್ಸ್ ಟು ನ್ಯಾಶನಲ್ ಆನರ್ ಌಕ್ಟ್ 1971 (The Prevention of Insults National Honour Act 1971) ಪ್ರಕಾರ ರಾಷ್ಟ್ರಧ್ವಜವನ್ನು ಸುಡುವುದು, ನೆಲಕ್ಕೆ ಬೀಳಿಸಿ ತುಳಿಯುವುದು, ವಿರೂಪಗೊಳಿಸುವುದು, ನಾಶಪಡಿಸುವುದು ಮತ್ತು ಅದರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವುದು ಇಲ್ಲವೇ ಬರೆಯುವುದು ಅಥವಾ ಕ್ರಿಯೆಗಳ ಮೂಲಕ ರಾಷ್ಟ್ರಧ್ವಜಕ್ಕೆ ಅಗೌರವ ತೋರುವುದು ಶಿಕ್ಷಾರ್ಹ ಅಪರಾಧವಾಗಿದೆ ಮತ್ತು ಆ ಕೃತ್ಯ ಎಸಗಿದವರಿಗೆ ಭಾರತೀಯ ಅಪರಾಧ ದಂಡ ಸಂಹಿತೆ ಪ್ರಕಾರರ ಮೂರು ವರ್ಷ ಸೆರೆವಾಸ ಇಲ್ಲವೇ ಜುಲ್ಮಾನೆ ಅಥವಾ ಎರಡನ್ನೂ ವಿಧಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯನವರು ಇದನ್ನೆಲ್ಲ ಹೇಳುವಾಗ ಈಶ್ವರಪ್ಪನವರು ಮೌನವಾಗಿ ಕೂತಿದ್ದರೆ, ಕಾಂಗ್ರೆಸ್ ಪಕ್ಷದ ಶಾಸಕರು ‘ಶೇಮ್ ಶೇಮ್’ ಎಂದು ಕೂಗುತ್ತಿದ್ದರು. ತಪ್ಪು ಈಶ್ವರಪ್ಪ ಮಾಡಲಿ, ತಾವು ಮಾಡಲಿ ಇಲ್ಲವೇ ಬೇರೆ ಯಾರೇ ಮಾಡಿದರೂ ಅದು ತಪ್ಪೇ ಅಂತ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:  ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಬೇಕು; ಸಂಪುಟದಿಂದ ಕೈಬಿಡಬೇಕು: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆಗ್ರಹ