ರೋಗಿಗಳ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ನಮ್ಮ ರಿಯಾಕ್ಷನ್ ಸಮಯ ಬಹಳ ಕ್ಷಿಪ್ರವಾಗಿರುತ್ತದೆ: ಡಾ ರಮಣ ರಾವ್
ಒಬ್ಬ ಸೆಲಿಬ್ರಿಟಿಯ ಆರೋಗ್ಯ ಕುರಿತು ಸಾರ್ವಜನಿಕವಾಗಿ ಮಾತಾಡುವುದು ಸಾಧ್ಯವಿಲ್ಲ. ಒಬ್ಬ ವೈದ್ಯನಾಗಿ ತಾವು ರೋಗಿಗಳ ಗೌಪ್ಯತೆಯನ್ನು ಕಾಪಾಡಬೇಕಾಗುತ್ತದೆ ಅಂತ ಡಾ ರಾವ್ ಹೇಳಿದರು.
ವೈದ್ಯರು ಸಾಮಾನ್ಯವಾಗಿ ತಮ್ಮ ರೋಗಿಗಳ ಆರೋಗ್ಯ ವಿಚಾರವನ್ನು ಬೇರೆಯವರೊಂದಿಗೆ ಚರ್ಚಿಸುವುದಿಲ್ಲ. ಅದರಲ್ಲೂ ಅವರ ರೋಗಿ ಸೆಲಿಬ್ರಿಟಿಯಾಗಿದ್ದರೆ, ಗೌಪ್ಯತೆ ಕಾಯ್ದುಕೊಳ್ಳಲೇ ಬೇಕಾದ ಅನಿವಾರ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪುನೀತ್ ರಾಜಕುಮಾರ ಅವರ ಆರೋಗ್ಯದ ಬಗ್ಗೆ ಡಾ ರಮಣ ರಾವ್ ಏನಾದರೂ ಮುಚ್ಚಿಟ್ಟಿದ್ದರಾ? ಅವರಿಗೆ ಉತ್ತಮ ಚಿಕಿತ್ಸೆ ಡಾ ರಾವ್ ಅವರು ನೀಡಿದ್ದರೂ ಸಾವಿನ ಬಗ್ಗೆ ತನಿಖೆ ನಡೆಯಬೇಕು ಎಂಬ ಕೂಗು ಎದ್ದಿರೋದು ಯಾಕೆ? ಈ ಗೊಂದಲವನ್ನು ನಿವಾರಿಸಿಕೊಳ್ಳಲು ಟಿವಿ9 ಖುದ್ದು ಡಾ ರಾವ್ ಅವರೊಂದಿಗೆ ಚರ್ಚಿಸಿತು.
ಡಾ ರಾವ್ ಅದೇ ಮಾತನ್ನು ಹೇಳಿದರು. ಒಬ್ಬ ಸೆಲಿಬ್ರಿಟಿಯ ಆರೋಗ್ಯ ಕುರಿತು ಸಾರ್ವಜನಿಕವಾಗಿ ಮಾತಾಡುವುದು ಸಾಧ್ಯವಿಲ್ಲ. ಒಬ್ಬ ವೈದ್ಯನಾಗಿ ತಾವು ರೋಗಿಗಳ ಗೌಪ್ಯತೆಯನ್ನು ಕಾಪಾಡಬೇಕಾಗುತ್ತದೆ. ಆದರೆ ಅಪ್ಪುಗೆ ತಾವು ಅತ್ಯಂತ ಸೂಕ್ತ ಮತ್ತು ಸಮರ್ಪಕವಾದ ಚಿಕಿತ್ಸೆಯನ್ನು ನೀಡಿರುವುದಾಗಿ ಹೇಳಿದ ಅವರು ತನ್ನ ಸ್ವಂತ ಮಗನಿಗೂ ಅದೇ ಚಿಕಿತ್ಸೆ ನೀಡುತ್ತಿದ್ದೆ ಅಂತ ಪುನರುಚ್ಛರಿಸಿದರು.
ಹಾಗಾದರೆ, ಅಪ್ಪು ಮನೆ ಹುಡುಗನ ಥರ ಅನ್ನುವ ಕಾರಣಕ್ಕೆ ಡಾ ರಾವ್ ಲೀನಿಯನ್ಸ್ ತೆಗೆದುಕೊಂಡರಾ ಎಂಬ ಪ್ರಶ್ನೆಗೆ ವೈದ್ಯರು, ‘ಕಳೆದ 47 ವರ್ಷಗಳಿಂದ ನಾನು ಜನರಿಗೆ ಸೇವೆ ಒದಗಿಸುತ್ತಿದ್ದೇನೆ, ಪೇಶಂಟ್ಗಳ ತಪಾಸಣೆ ಮಾಡುವಾಗ ನಮ್ಮ ರಿಯಾಕ್ಷನ್ ಟೈಮ್ ಬಹಳ ಕ್ವಿಕ್ ಆಗಿರುತ್ತದೆ. ತುರ್ತು ಸಂದರ್ಭದಲ್ಲಿ ರೋಗಿಗೆ ಯಾವ ಆಸ್ಪತ್ರೆಗೆ ರೆಫರ್ ಮಾಡಬೇಕಾಗಿ ಅಂತ ಬಂದಾಗ ಅವನಿಗೆ ಅತ್ಯುತ್ತಮ ಚಿಕಿತ್ಸೆ ಸಿಗುವ ಆಸ್ಪತ್ರೆಗೆ ರೆಫರ್ ಮಾಡಬೇಕಾಗುತ್ತದೆ. ಹಾಗೆ ಆಸ್ಪತ್ರೆಯನ್ನು ಸೆಲೆಕ್ಟ್ ಮಾಡುವಾಗ ನಾವು ರೋಗಿಯ ಆರ್ಥಿಕ ಸ್ಥಿತಿಯ ಬಗ್ಗೆಯೂ ಯೋಚನೆ ಮಾಡಬೇಕಾಗುತ್ತದೆ. ಎಲ್ಲರನ್ನೂ ನಾವು ವಿಕ್ರಮ್ ಆಸ್ಪತ್ರೆಗೆ ರೆಫರ್ ಮಾಡಲಾಗದು. ಆರ್ಥಿಕವಾಗಿ ದುರ್ಬಲರಾಗಿರುವವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರೆಫರ್ ಮಾಡಬೇಕಾಗುತ್ತದೆ,’ ಎಂದು ವೈದ್ಯರು ಹೇಳಿದರು.