ಬಿಜೆಪಿಯ ಇಬ್ಬರು ಬಸವರಾಜಗಳ ನಡುವಿನ ಪಿಸುಮಾತಿನ ಸಂಭಾಷಣೆ ಶಿಸ್ತಿನ ಪಕ್ಷದಲ್ಲೂ ಎಲ್ಲವೂ ಸರಿಯಾಗಿಲ್ಲ ಅಂತ ಸಾಬೀತು ಮಾಡುತ್ತದೆ!!

ಮಾಧುಸ್ವಾಮಿಯನ್ನು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಗೆ ಹೋಲಿಸಿರುವ ಸಂಸದರು, ‘ಈ ನನ್ ಮಗನಿಂದ ಜಿಲ್ಲೆಯೇ ಎಕ್ಕುಟ್ಟಿ ಹೋಗಿದೆ, ನಮಗೆ ಒಂದೇ ಸೀಟು ಸಹ ಬರುವುದಿಲ್ಲ,’ ಎಂದು ಕೋಪದಲ್ಲಿ ಹೇಳುತ್ತಾರೆ.

TV9kannada Web Team

| Edited By: Arun Belly

Jan 06, 2022 | 10:53 PM

ಬಿಜೆಪಿ ನಾಯಕರು ತಾವು ಶಿಸ್ತುಬದ್ಧ ಪಕ್ಷದ ಸದಸ್ಯರು, ಶಿಸ್ತಿನ ಸಿಪಾಯಿಗಳು, ಪಕ್ಷದಲ್ಲಿ ಒಳಜಗಳ ಇಲ್ಲ, ಎಲ್ಲರ ನಾಯಕರ ನಡುವೆ ಅದ್ಭುತವಾದ ಸಮನ್ವಯತೆ ಇದೆ ಅಂತೆಲ್ಲ ಹೇಳಿಕೊಳ್ಳುತ್ತಾರೆ. ಆದರೆ ಅವರು ಹೇಳೋದು ಬರೀ ಓಳು ಮಾರಾಯ್ರೇ. ತುಮಕೂರಿನಲ್ಲಿ ಗುರುವಾರದಂದು ನಡೆದ ಸುದ್ದಿಗೋಷ್ಟಿಯೊಂದರಲ್ಲಿ ಸಚಿವ ಭೈರತಿ ಬಸವರಾಜ ಮತ್ತು ತುಮಕೂರು ಸಂಸದ ಜಿಎಸ್ ಬಸವರಾಜ ಅವರ ನಡುವೆ ನಡೆದ ಪಿಸುಮಾತಿನ ಸಂಭಾಷಣೆ ಶಿಸ್ತಿನ ಸಿಪಾಯಿಗಳ ಪಕ್ಷದಲ್ಲಿ ಎಲ್ಲವೂ ಸರಿಯಲ್ಲ ಎನ್ನುವುದನ್ನು ಸಾಬೀತು ಮಾಡುತ್ತದೆ. 80 ವರ್ಷ ವಯಸ್ಸಿನ ಬಸವರಾಜ ಅವರಿಗೆ ಮೈಕ್ ಆನ್ ಇರುಬಹುದಾದ ಸಂಗತಿ ತಲೆಗೆ ಹೊಳೆದಿಲ್ಲ. ಆದರೆ ಅದರ ಬಗ್ಗೆ ಮಾಹಿತಿ ಇರುವ ಭೈರತಿ ಸಂಸದರು ಮಾತಾಡುವುದನ್ನು ತಡೆಯುವ ಪ್ರಯತ್ನ ಮಾಡುತ್ತಾರೆ.

ಅದರೆ, ಅಷ್ಟರಲ್ಲಿ ಸಂಸದ ಬಸವರಾಜ ಅವರಿಗೆ ಕಾನೂನು ಸಚಿವ ಮಾಧುಸ್ವಾಮಿ ಬಗ್ಗೆ ಇರುವ ಅಸಮಾಧಾನ, ಕೋಪ ಮತ್ತು ಹತಾಷೆ ಹೊರಬಿದ್ದಾಗಿರುತ್ತದೆ. ಸಂಸದರು ಮಾಧುಸ್ವಾಮಿಯವರ ಹೆಸರನ್ನು ಪ್ರಸ್ತಾಪಿಸದೆ ಮಾತಾಡಿರುವರಾದರೂ ಅವರ ಬಗ್ಗೆಯೇ ಕಾಮೆಂಟ್ ಮಾಡುತ್ತಿದ್ದಾರೆ ಅನ್ನೋದು ಮಾತ್ರ ಚಿಕ್ಕಮಕ್ಕಳಿಗೂ ಅರ್ಥವಾಗುತ್ತೆ.

ಮಾಧುಸ್ವಾಮಿ ತಮ್ಮನ್ನು ಅಸಡ್ಡೆ ಮಾಡುತ್ತಿದ್ದಾರೆ, ಕಡೆಗಣಿಸುತ್ತಿದ್ದಾರೆ ಎಂಬ ಹತಾಷೆ ಮತ್ತು ಕೋಪವನ್ನು ಸಂಸದರು ಹೊರಹಾಕಿದ್ದಾರೆ. ಮಾಧುಸ್ವಾಮಿಯನ್ನು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಗೆ ಹೋಲಿಸಿರುವ ಸಂಸದರು, ‘ಈ ನನ್ ಮಗನಿಂದ ಜಿಲ್ಲೆಯೇ ಎಕ್ಕುಟ್ಟಿ ಹೋಗಿದೆ, ನಮಗೆ ಒಂದೇ ಸೀಟು ಸಹ ಬರುವುದಿಲ್ಲ,’ ಎಂದು ಕೋಪದಲ್ಲಿ ಹೇಳುತ್ತಾರೆ. ಅಧಿಕಾರಿಗಳನ್ನು ಮನಬಂದಂತೆ ಬಯ್ಯುತ್ತಾನೆ, ರೌಡಿಗಳ ಭಾಷೆ ಪ್ರಯೋಗಿಸುತ್ತಾನೆ, ಯಾವುದೇ ಸರ್ಕಾರೀ ಕಾರ್ಯಕ್ರಮಗಳಿಗೆ ತನ್ನನ್ನು ಆಹ್ವಾನಿಸುವುದಿಲ್ಲ ಅಂತಲೂ ಸಂಸದ ಬಸವರಾಜ ಹೇಳಿದ್ದಾರೆ.

ನಿಮಗೆ ನೆನಪಿರಬಹುದು ಇಂಥದ್ದೇ ಅಚಾತುರ್ಯ ಕಾಂಗ್ರೆಸ್ ನಾಯಕರಾದ ವಿ ಎಸ್ ಉಗ್ರಪ್ಪ ಮತ್ತು ಸಲೀಂ ಅಹ್ಮದ್ ಅವರ ನಡುವೆ ನಡೆದಿತ್ತು. ಅವರಿಬ್ಬರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬಗ್ಗೆ ಹಗುರವಾಗಿ ಮಾತಾಡಿದ್ದರು. ಘಟನೆಯ ನಂತರ ಸಲೀಂ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿದರೆ ಉಗ್ರಪ್ಪನವರಿಗೆ ಶೋಕಾಸ್ ನೋಟಿಸ್ ಜಾರಿಮಾಡಲಾಗಿತ್ತು.

ಅದಿನ್ನೂ ಕನ್ನಡಿಗರ ಮನದಲ್ಲಿ ಹಸಿರಾಗಿರುವಾಗಲೇ ಬಿಜೆಪಿ ನಾಯಕರು ಅಂಥದ್ದೇ ಪ್ರಮಾದವೆಸಗಿ ಪಕ್ಷದ ವಿರುದ್ಧ ಟೀಕೆಗಳನ್ನು ಮಾಡಲು ಕಾಂಗ್ರೆಸ್ ಮತ್ತು ಜೆಡಿ(ಎಸ್) ನಾಯಕರಿಗೆ ಸರಕು ಒದಗಿಸಿದ್ದಾರೆ.

ಇದನ್ನೂ ಓದಿ:    Viral video: ಅಭಿಮಾನಿಯ ಬೋಳು ತಲೆ ಮೇಲೆ ಆಟೋಗ್ರಾಫ್ ಹಾಕಿದ ಇಂಗ್ಲೆಂಡ್ ಕ್ರಿಕೆಟರ್! ವಿಡಿಯೋ ನೋಡಿ

Follow us on

Click on your DTH Provider to Add TV9 Kannada