ವನ್ಯಜೀವಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅನಿಲ್ ಕುಂಬ್ಳೆ ಅರಣ್ಯ ಇಲಾಖೆ ರಾಯಭಾರಿಯಾಗಲು ಸಮ್ಮತಿಸಿದ್ದಾರೆ: ಈಶ್ವರ್ ಖಂಡ್ರೆ
ಭಾರತೀಯ ಮತ್ತು ಜಾಗತಿಕ ಕ್ರಿಕೆಟ್ಗೆ ಅನಿಲ್ ಕುಂಬ್ಳೆ ನೀಡಿದ ಕೊಡುಗೆಯನ್ನು ಸಚಿವ ಈಶ್ವರ್ ಖಂಡ್ರೆ ಶ್ಲಾಘಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಖ್ಯಾತಿ ಎಂಥದ್ದು ಅನ್ನೋದು ಎಲ್ಲರಿಗೂ ಗೊತ್ತು, ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯವೊಂದರಲ್ಲಿ ಒಂದು ಇನ್ನಿಂಗ್ಸ್ ನ ಎಲ್ಲ 10 ವಿಕೆಟ್ಗಳನ್ನು ಪಡೆದು ವಿಶ್ವದಾಖಲೆಯನ್ನು ಸರಿಗಟ್ಟಿದ ಹಿರಿಮೆ ಕುಂಬ್ಳೆ ಅವರದ್ದು ಎಂದು ಸಚಿವ ಹೇಳಿದರು.
ಬೆಂಗಳೂರು, ಜೂನ್ 3: ಇವತ್ತು ಐಪಿಎಲ್ ಫೈನಲ್ ಹಾಗಾಗಿ ಎಲ್ಲೆಡೆ ಕ್ರಿಕೆಟ್ ಮತ್ತು ಕ್ರಿಕೆಟರ ಗಳದ್ದೇ ಮಾತು. ಮಾಜಿ ಕ್ರಿಕೆಟರ್ ಮತ್ತು ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಅನಿಲ್ ಕುಂಬ್ಳೆ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ನಡುವೆ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ನಲ್ಲಿ (Seven Minister Quarters) ಮಾತುಕತೆ ನಡೆಯಿತು. ನಂತರ ಮಾಧ್ಯಮ ಪ್ರತಿನಿಧಿಗಳಳೊಂದಿಗೆ ಮಾತಾಡಿದ ಸಚಿವ ಖಂಡ್ರೆ, ವನ್ಯಜೀವಿ, ಪ್ರಕೃತಿ ಹಾಗೂ ಪರಿಸರದ ಬಗ್ಗೆ ಕುಂಬ್ಳೆ ಅವರು ಅಪಾರ ಕಾಳಜಿ ಹೊಂದಿದ್ದಾರೆ, ಹಿಂದೆ ಅವರು ರಾಜ್ಯ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು. ಈಗ ಕುಂಬ್ಳೆ, ಅರಣ್ಯ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಇಲಾಖೆಯ ರಾಯಭಾರಿಯಾಗಲು ಒಪ್ಪಿದ್ದಾರೆ ಎಂದು ತಿಳಿಸಲು ಬಹಳ ಸಂತೋಷವಾಗುತ್ತದೆ ಎಂದ ಖಂಡ್ರೆ ಮುಂದಿನ ಕೆಲದಿನಗಳಲ್ಲಿ ಅವರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ಅಧಿಕೃತ ಆದೇಶ ಪ್ರತಿ ನೀಡಲಾಗುವುದು ಅಂತ ಹೇಳಿದರು.
ಇದನ್ನೂ ಓದಿ: ‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಡಿಕೆಶಿ ಭೇಟಿ ಬಳಿಕ ಅನಿಲ್ ಕುಂಬ್ಳೆ ಮಾತು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ