ಭೀಮಾ ನದಿಯಲ್ಲಿ ಭಾರೀ ಪ್ರವಾಹ: 2 ದೇಗುಲಗಳು ಸಂಪೂರ್ಣ ಮುಳುಗಡೆ
ಯಾದಗಿರಿಯಲ್ಲಿ ಭೀಮಾ ನದಿ ಉಕ್ಕಿ ಹರಿಯುತ್ತಿದ್ದು, ಎರಡು ದೇಗುಲಗಳು ಸಂಪೂರ್ಣ ಮುಳುಗಡೆಯಾಗಿವೆ. ಸದ್ಯ ನೀರಿನ ಮಟ್ಟ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇರುವ ಕಾರಣ ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಭೀಮಾ ನದಿಯ ಹರಿವು, ದೇಗುಲ ಮುಳುಗಡೆ ಕುರಿತು ವಿಡಿಯೋ ವರದಿ ಇಲ್ಲಿದೆ ನೋಡಿ.
ಯಾದಗಿರಿ, ಜುಲೈ 31: ಮಹಾರಾಷ್ಟ್ರ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಯಾದಗಿರಿ ನಗರದ ಹೊರ ಭಾಗದಲ್ಲಿ ಹರಿಯುವ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಭೀಮಾ ನದಿ ಮೈದುಂಬಿಕೊಂಡು ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನದಿ ದಡದಲ್ಲಿರುವ ಕಂಗಾಳೇಶ್ವರ ಹಾಗೂ ವೀರಾಂಜನೇಯ ದೇಗುಲಗಳು ಸಂಪೂರ್ಣ ಮುಳುಗಡೆಯಾಗಿವೆ. ಈ ದೇಗುಲಗಳು ನದಿಯಿಂದ ಸುಮಾರು 100 ಅಡಿ ದೂರದಲ್ಲಿವೆ. ಸದ್ಯ ಮುಳುಗಡೆಯಾಗಿರುವ ಕಾರಣ ಭಕ್ತರಿಗೆ ದರ್ಶನ ಭಾಗ್ಯ ಸಿಗುತ್ತಿಲ್ಲ. ಶ್ರಾವಣ ಮಾಸ ಹಿನ್ನಲೆ ನಿತ್ಯ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ವಡಗೇರ ತಾಲೂಕಿನ ಗುರುಸಣಿ ಬ್ಯಾರೇಜ್ ನಿಂದ 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ನದಿಯ ಎರಡು ಬದಿಯ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಉಂಟಾಗಿದೆ. ನದಿ ದಡಕ್ಕೆ ತೆರಳದಂತೆ ಜಿಲ್ಲಾಡಳಿತದಿಂದ ಸೂಚನೆ ನೀಡಿದೆ.