ಇಂಧನ ಇಲಾಖೆಯಲ್ಲಿ ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು ನೋಡಿ
ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪದಿಂದ ಸಚಿವ ಕೆಜೆ ಜಾರ್ಜ್ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಮಾಧ್ಯಮ ವರದಿಗಳನ್ನು ಸದನದಲ್ಲಿ ಬಿಜೆಪಿ ಪ್ರಶ್ನಿಸಿದೆ. ಆದರೆ, ಮಾಧ್ಯಮ ವರದಿಯನ್ನು ಸಚಿವ ಕೆಜೆ ಜಾರ್ಜ್ ತಳ್ಳಿಹಾಕಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳು ಸುಳ್ಳು ಸುದ್ದಿ ಸೃಷ್ಟಿಸುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಜನವರಿ 29: ಇಂಧನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪದಿಂದ ಸಚಿವ ಕೆಜೆ ಜಾರ್ಜ್ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ‘ಟಿವಿ9’ ವರದಿ ಉಲ್ಲೇಖಿಸಿ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿ ಪ್ರಶ್ನೆ ಮಾಡಿದೆ. ಈ ವಿಚಾರವಾಗಿ ಸಚಿವ ಜಾರ್ಜ್ ಸದನದಲ್ಲೇ ಸ್ಪಷ್ಟನೆ ನೀಡಬೇಕೆಂದು ವಿರೋಧ ಪಕ್ಷದ ನಾಯಕರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಇಂಧನ ಜಾರ್ಜ್, ತಮ್ಮ ರಾಜೀನಾಮೆಯ ಪ್ರಶ್ನೆಯೇ ಉದ್ಭವಿಸಿಲ್ಲ. ಮುಖ್ಯಮಂತ್ರಿಗಳ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದೆ ಮತ್ತು ಅವರಿಗೆ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಗಳು ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಸೃಷ್ಟಿಸುತ್ತಿವೆ ಎಂದು ಜಾರ್ಜ್ ಆರೋಪಿಸಿದರು. ಹಳೆಯ ಕಾಲದಲ್ಲಿ ದಿನಕ್ಕೆ ಮೂರು ಸುದ್ದಿ ಪ್ರಸಾರವಾಗುತ್ತಿತ್ತು, ಈಗ ಪ್ರತಿ ಗಂಟೆಗೂ ಬ್ರೇಕಿಂಗ್ ನ್ಯೂಸ್ ಬೇಕಾಗಿದೆ. ಹೀಗಾಗಿ ಮಾಧ್ಯಮಗಳು ಸೃಷ್ಟಿ ಮಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ರಾಜೀನಾಮೆ ನೀಡುವ ಯಾವುದೇ ಪ್ರಶ್ನೆಯೂ ಇಲ್ಲ, ಇದು ಕೇವಲ ವದಂತಿ ಎಂದು ಜಾರ್ಜ್ ಸದನಕ್ಕೆ ತಿಳಿಸಿದರು.
