ಸ್ವಾಮಿನಾಥನ್ ಆಯೋಗದ ಶೇಕಡ 90ರಷ್ಟು ಶಿಫಾರಸ್ಸುಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ: ಬಿ ಎಸ್ ಯಡಿಯೂರಪ್ಪ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 18, 2022 | 4:09 PM

ಸ್ವಾಮಿನಾಥನ್ ಆಯೋಗ ಮಾಡಿರುವ ಶಿಫಾರಸ್ಸುಗಳ ಮೇಲೆ ಒಮ್ಮೆ ಕಣ್ಣು ಹಾಯಿಸಿ ಎಂದು ನಾಡಗೌಡರಿಗೆ ಹೇಳುವ ಯಡಿಯೂರಪ್ಪನವರು ಅವುಗಳ ಪೈಕಿ ಶೇಕಡಾ 90 ರಷ್ಟನ್ನು ಜಾರಿಗೆ ತರಲಾಗಿದೆ ಎಂದರು.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು (BS Yediyurappa) ಸದನದಲ್ಲಿ ಮಾತಾಡಲು ಎದ್ದು ನಿಂತರೆ ಎಲ್ಲರು ಗಮನವಿಟ್ಟು ಕೇಳುತ್ತಾರೆ. ಅದರಲ್ಲಿ ಅನುಮಾನವೇ ಬೇಡ. ಶುಕ್ತವಾರ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ (Venkatrao Nadagouda) ಅವರು ರೈತರ ಪಂಪ್ ಸೆಟ್ ಗಳಿಗೆ (pump set) ಸರ್ಕಾರ ಒದಗಿಸುತ್ತಿರುವ ವಿದ್ಯುತ್ ಪೂರೈಕೆ ಮತ್ತು ಇತರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅಸ್ಪಷ್ಟವಾಗಿ ಪ್ರಶ್ನೆಗಳನ್ನು ಕೇಳಿದಾಗ ಯಡಿಯೂರಪ್ಪನವರು ಸರ್ಕಾರದ ಪರವಾಗಿ ಮಾತಾಡಿದರು. 3 ಹೆಚ್ ಪಿ ಯಿಂದ 8 ಹೆಚ್ ಪಿ ಪಂಪ್ ಸೆಟ್ ಗಳನ್ನು ಹೊಂದಿರುವ ಎಲ್ಲ ರೈತರಿಗೆ ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತಿದೆ, ನಿಮಲ್ಲಿರುವ ಮಾಹಿತಿ ತಪ್ಪು. ನಿಮಗೇನಾದರೂ ಸಮಸ್ಯೆ ಇದ್ದರೆ ದಯವಿಟ್ಟು ಸ್ಪಷ್ವವಾಗಿ ಹೇಳಿ, ಯಾವುದನ್ನೂ ಗೊಂದಲಮಯವಾಗಿ ಸದನದ ಮುಂದೆ ಇಡಬೇಡಿ. ನೀವು ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಸಮಸ್ಯೆಗಳನ್ನು ನಮಗೆ ಅರ್ಥವಾಗುವ ರೀತಿಯಲ್ಲಿ ಹೇಳಿ ಖಂಡಿತವಾಗಿ ಚರ್ಚೆ ಮಾಡೋಣ ಎಂದು ಬಿ ಎಸ್ ವೈ ಹೇಳುತ್ತಾರೆ.

ಸ್ವಾಮಿನಾಥನ್ ಆಯೋಗ ಮಾಡಿರುವ ಶಿಫಾರಸ್ಸುಗಳ ಮೇಲೆ ಒಮ್ಮೆ ಕಣ್ಣು ಹಾಯಿಸಿ ಎಂದು ನಾಡಗೌಡರಿಗೆ ಹೇಳುವ ಯಡಿಯೂರಪ್ಪನವರು ಅವುಗಳ ಪೈಕಿ ಶೇಕಡಾ 90 ರಷ್ಟನ್ನು ಜಾರಿಗೆ ತರಲಾಗಿದೆ ಎಂದರು. ರೈತ ತಾನು ಬೆಳೆದಿರುವ ಬೆಳೆಗಳಿಗೆ ಸಕಾಲಕ್ಕೆ ಬೆಂಬಲ ಬೆಲೆ ಸಿಗದಿರುವ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು, ಅವನ್ನು ತನ್ನ ಫಸಲನ್ನು ಮಾರಿದ ಎರಡು ತಿಂಗಳುಗಳ ಬಳಿಕ ಬೆಲೆ ಜಾಸ್ತಿಯಾಗುತ್ತದೆ ಮತ್ತು ರೈತ ಯಾತನೆ ಅನುಭವಿಸುತ್ತಾನೆ ಎಂದರು.

ಸರ್ಕಾರ ರೈತರ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದೆ, ಆದರೆ ಮಾಡಬೇಕಿರುವುದು ಇನ್ನೂ ಬಹಳಷ್ಟಿದೆ. ಅವರ ಸಮಸ್ಯೆಗಳನ್ನು ಎಲ್ಲರೂ ಸೇರಿ ಚರ್ಚೆ ಮಾಡೋಣ. ಅದರೆ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲದೆ ದಯವಿಟ್ಟು ಮಾತಾಡಬೇಡಿ ಎಂದು ಬಿ ಎಸ್ ಯಡಿಯೂರಪ್ಪ ಜೆಡಿಎಸ್ ಶಾಸಕರಿಗೆ ಹೇಳಿದರು.

ಇದನ್ನೂ ಓದಿ:  ಕೊರೊನಾ ಲಸಿಕೆ ಕೊಟ್ಟವರು ನೀವಾ, ಕಾಂಗ್ರೆಸ್ ಕೊಟ್ಟ ಲಸಿಕೆ ಗುರುತು ನಿಮ್ಮ ಭುಜದ ಮೇಲಿದೆ ನೋಡಿ: ಸದನದಲ್ಲಿ ಮಾತಿನ ಜಟಾಪಟಿ

Follow us on