ಕೊರೊನಾ ಲಸಿಕೆ ಕೊಟ್ಟವರು ನೀವಾ, ಕಾಂಗ್ರೆಸ್ ಕೊಟ್ಟ ಲಸಿಕೆ ಗುರುತು ನಿಮ್ಮ ಭುಜದ ಮೇಲಿದೆ ನೋಡಿ: ಸದನದಲ್ಲಿ ಮಾತಿನ ಜಟಾಪಟಿ
ಆಹಾರ ಇಲಾಖೆಯು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುತ್ತಿದೆ. ಎಷ್ಟೋ ಬಡವರ ಬಿಪಿಎಲ್ ಕಾರ್ಡ್ ಇದೀಗ ರದ್ದಾಗಿದೆ, ಕೆಲವರ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಎಂದು ಬದಲಿಸಲಾಗಿದೆ ಎಂದು ಸಿದ್ದು ಸವದಿ ದೂರಿದರು.
ಬೆಂಗಳೂರು: ಬಡತನ ರೇಖೆಗಿಂತಲೂ ಕೆಳಗಿರುವವರಿಗೆ ನೀಡುವ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಿರುವ ವಿಚಾರವಾಗಿ ಸ್ವಪಕ್ಷದ ವಿರುದ್ಧವೇ ತೇರದಾಳ ಶಾಸಕ ಸಿದ್ದು ಸವದಿ ಅಸಮಾಧಾನ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಆಹಾರ ಇಲಾಖೆಯು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುತ್ತಿದೆ. ಎಷ್ಟೋ ಬಡವರ ಬಿಪಿಎಲ್ ಕಾರ್ಡ್ ಇದೀಗ ರದ್ದಾಗಿದೆ, ಕೆಲವರ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಎಂದು ಬದಲಿಸಲಾಗಿದೆ. ಅಧಿಕಾರಿಗಳನ್ನು ಈ ಕುರಿತು ಪ್ರಶ್ನಿಸಿದರೆ, ಮರುಪರಿಶೀಲನೆ ಅರ್ಜಿ ಹಾಕಲು ಸೂಚಿಸುತ್ತಾರೆ. ಅರ್ಜಿ ಹಾಕಿದ ಮೇಲೆ ಮತ್ತೆ ಬಿಪಿಎಲ್ ಕಾರ್ಡ್ ಬರಲು 6 ತಿಂಗಳ ಓಡಾಡಬೇಕಾಗುತ್ತದೆ ಎಂದು ಹೇಳಿದರು.
ಇಲಾಖಾವಾರು ಅನುದಾನ ಮತ್ತು ಬೇಡಿಕೆಗಳ ಮೇಲೆ ಮಾತನಾಡಿದ ಅವರು, ರಾಜ್ಯದಲ್ಲಿ ಅರ್ಹ ಫಲಾನುಭವಿಗಳಿಗೆ ಪಡಿತರ ಸಿಗುತ್ತಿಲ್ಲ. ಫಲಾನುಭವಿಗಳ ಕಾರ್ಡ್ ರದ್ದು ಮಾಡಿದ್ದು ಸರಿಯಲ್ಲ ಎಂದರು. ನೀವು ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಿ ಎಂದು ನಾನು ಕೇಳುತ್ತಿಲ್ಲ. ಆದರೆ ಅರ್ಹರ ಬಿಪಿಎಲ್ ಕಾರ್ಡು ರದ್ದು ಮಾಡಬೇಡಿ ಎಂದು ಕೋರಿದರು. ಚರ್ಚೆಯ ವೇಳೆ ಕೊರೊನಾ ನಿರ್ವಹಣೆ ವಿಚಾರವನ್ನೂ ಸಿದ್ದುಸವದಿ ಪ್ರಸ್ತಾಪಿಸಿದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊರೊನಾ ಪಿಡುಗನ್ನು ಯಶಸ್ವಿಯಾಗಿ ನಿಭಾಯಿಸಿದೆ. ಕೊರೊನಾಗೆ ಪ್ರಪಂಚದ ದೊಡ್ಡಣ್ಣ ಅಮೆರಿಕ ಸಹ ನಲುಗಿಹೋಗಿದ್ದ. ಆದರೆ, ನಮ್ಮ ನರೇಂದ್ರ ಮೋದಿ ಯಶಸ್ವಿಯಾಗಿ ಎದುರಿಸಿದರು. ಉದ್ಯೋಗ ಸೃಷ್ಟಿಗೂ ಒತ್ತು ನೀಡಲಾಗಿದೆ ಎಂದು ಹೇಳಿದರು.
ವಿಧಾನಸಭೆ ಕೇಂದ್ರ ಸರ್ಕಾರದ ಬಗ್ಗೆ ಪ್ರಸ್ತಾಪಿಸಿದ ಸಿದ್ದು ಸವದಿಗೆ ಟಾಂಗ್ ಕೊಟ್ಟ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಇದು ಲೋಕಸಭೆ ಅಲ್ಲ ಎಂದರು. ರಾಜ್ಯ ಬಜೆಟ್ ಮೇಲೆ ಚರ್ಚೆ ಮಾಡಿ ಎಂದರು. ಎರಡು ವರ್ಷಗಳಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಆಗಿದೆ? ಕೇಂದ್ರ ಮತ್ತು ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಝೀರೋ ಎಂದು ಹರಿಹಾಯ್ದರು. ಈ ಮಾತಿಗೆ ಪ್ರತಿಕ್ರಿಯಿಸಿದ ಸವದಿ, ‘ಕೊರೊನಾಗೆ ವ್ಯಾಕ್ಸಿನ್ ನೀವು ಕೊಟ್ರಾ’ ಎಂದು ಲೇವಡಿ ಮಾಡಿದರು. ಈ ವೇಳೆ ಸಿದ್ದು ಸವದಿಗೆ ಮತ್ತೊಮ್ಮೆ ಟಾಂಗ್ ಕೊಟ್ಟ ಪ್ರಿಯಾಂಕ್ ಖರ್ಗೆ, ‘ಭುಜದ ಮೇಲಿನ ಗುರುತು ಇರುತ್ತೆ ನೋಡಿ, ಅದು ಕಾಂಗ್ರೆಸ್ ಕೊಟ್ಟಿರುವ ವ್ಯಾಕ್ಸಿನ್’ ಎಂದರು.
ಕೊವಿಡ್ ನಿರ್ವಹಣೆ ಕುರಿತು ಚರ್ಚೆಯ ವೇಳೆ ನಿಮ್ಮ ಸರ್ಕಾರವಿದ್ದ ಮಹಾರಾಷ್ಟ್ರದಲ್ಲಿ ಏನಾಯ್ತು? ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಏನಾಯ್ತು? ನಿಮ್ಮ ನಾಯಕಿಯ ಮೂಲ ಸ್ಥಾನ ಇಟಲಿಯಲ್ಲಿ ಏನಾಯ್ತು? ನಮ್ಮ ಬಗ್ಗೆ, ಮೋದಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದ ಸಿದ್ದು ಸವದಿ ದೂರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸೋನಿಯಾ ಗಾಂಧಿ ಭಾರತ ದೇಶದ ಚುನಾಯಿತ ಜನಪ್ರತಿನಿಧಿ. ಇಟಲಿಯವರು ಎಂಪಿ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಅನುದಾನ ಕಡಿತಗೊಳಿಸಿರುವ ಕುರಿತು ವಿಧಾನಸಭೆಯಲ್ಲಿ ಸದಸ್ಯ ಶ್ರೀಕಂಠ ಪ್ರಸ್ತಾಪಿಸಿದರು. ‘ಶಾಸಕರ ನಿಧಿ ಹಿಂಪಡೆದಿರುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು. ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಸಚಿವ ಮುನಿರತ್ನ, ‘ಶೇ 90ರಷ್ಟು ಅನುದಾನಗಳ ಕಾಮಗಾರಿಯನ್ನು ಸದಸ್ಯರು 15 ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದರು. 2018-22ರವರೆಗಿನ ಅನುದಾನವನ್ನು ನಾವು ಹಿಂಪಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.
ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಸದಸ್ಯರು ಧರಣಿ ನಡೆಸಿದರು. ಸಚಿವ ಶ್ರೀರಾಮುಲು ನಿನ್ನೆ ನೀಡಿದ್ದ ಉತ್ತರಕ್ಕೂ ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಜೆಡಿಎಸ್ ಸದಸ್ಯರ ಆಕ್ಷೇಪಕ್ಕೆ ಉತ್ತರ ನೀಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಮೀಸಲಾತಿ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬುಧವಾರ ಸಭೆ ನಡೆಸುತ್ತೇವೆ. ಸಭೆಯಲ್ಲಿ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ಭರವಸೆ ಕೊಟ್ಟರು. ಸಚಿವರು ಭರವಸೆ ನೀಡಿದ ನಂತರ ಜೆಡಿಎಸ್ ಸದಸ್ಯರು ಧರಣಿ ಕೈಬಿಟ್ಟರು.
ಕೈವಾರ ತಾತಯ್ಯ ಜಯಂತಿಯನ್ನು ಸರಿಯಾದ ದಿನದಂದೇ ಆಚರಿಸಬೇಕು ಎಂದು ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಮನವಿ ಮಾಡಿದರು. ಸಲಹೆ ಕುರಿತು ಮುಖ್ಯಮಂತ್ರಿ ಜೊತೆಗೆ ಚರ್ಚೆ ನಡೆಸುವುದಾಗಿ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು. ಮಾರ್ಚ್ 27ರಂದು ಸರ್ಕಾರದ ವತಿಯಿಂದ ಜಯಂತಿ ಆಚರಿಸಲು ರಾಜ್ಯ ಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು. ಫಾಲ್ಗುಣ ಮಾಸದ ಹುಣ್ಣಿಮೆಯಂದೇ ಆಚರಣೆ ಮಾಡಬೇಕು ಎಂದು ಸದನದಲ್ಲಿ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಮನವಿ ಮಾಡಿದರು.
ಜಾರಿಯಾಗದ ನೇಕಾರರ ಸಾಲಮನ್ನಾ ಯೋಜನೆ
ಕರ್ನಾಟಕ ಸರ್ಕಾರವು ನೇಕಾರರ ಸಾಲಮನ್ನಾ ಯೋಜನೆಯನ್ನು ಸಮರ್ಪಕ ರೀತಿಯಲ್ಲಿ ಜಾರಿ ಮಾಡಬೇಕು ಎಂದು ಬಿಜೆಪಿ ಶಾಸಕ ಸಿದ್ದು ಸವದಿ ಒತ್ತಾಯಿಸಿದರು. ನೇಕಾರ್ ಸಮ್ಮಾನ್ ಯೋಜನೆ ಘೋಷಣೆ ಮಾಡಿದ್ದರೂ ಬ್ಯಾಂಕ್ಗಳು ಸಾಲ ಮರುಪಾವತಿಗೆ ಒತ್ತಾಯಿಸುತ್ತಿವೆ. ಹೊಸದಾಗಿ ಸಾಲ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು.
ಇದನ್ನೂ ಓದಿ: ವಿಧಾನಸಭೆ ಚುನಾವಣೆಯಲ್ಲಿ ಸೋಲು; ಗೆದ್ದ ಕ್ಷೇತ್ರ ಕರ್ಹಾಲ್ ತೊರೆದು, ಸಂಸದರಾಗಿಯೇ ಮುಂದುವರಿಯಲಿದ್ದಾರಂತೆ ಅಖಿಲೇಶ್ ಯಾದವ್
ಇದನ್ನೂ ಓದಿ: Holi 2022: ‘ಹೋಳಿ ಪರಿಸರ ಸ್ನೇಹಿಯಾಗಿರಲಿ’; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭಾಶಯ
Published On - 3:02 pm, Fri, 18 March 22