ಈಗ ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಪ್ರವಾಹ ಸಂತ್ರಸ್ತೆಯ ಪ್ರಶ್ನೆಗೆ ಮಳೆಯಲ್ಲೂ ಬೆವರಿದ ಕಂಗನಾ ರಣಾವತ್
ಭಾರೀ ಪ್ರವಾಹಕ್ಕೆ ಒಳಗಾಗಿರುವ ಹಿಮಾಚಲ ಪ್ರದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಇಲ್ಲಿನ ಮಂಡಿ ಸಂಸದೆಯಾಗಿರುವ ಕಂಗನಾ ರಣಾವತ್ ಇಷ್ಟು ದಿನಗಳಾದ ನಂತರ ಇಂದು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಮಂಡಿಗೆ ಭೇಟಿ ನೀಡುವಲ್ಲಿ ವಿಳಂಬವಾಗಿದ್ದಕ್ಕಾಗಿ ಕಾಂಗ್ರೆಸ್ ಕೂಡ ಬಿಜೆಪಿ ಸಂಸದೆ ಕಂಗನಾರನ್ನು ಟೀಕಿಸಿತ್ತು. ಅದಕ್ಕೆ ಕಂಗನಾ ಕೂಡ ಉತ್ತರ ನೀಡಿದ್ದರು.
ಮಂಡಿ, ಜುಲೈ 7: ಹಿಮಾಚಲ ಪ್ರದೇಶದಲ್ಲಿ (Himachal Pradesh Rains) ಪ್ರವಾಹ ಮತ್ತು ಭೂಕುಸಿತದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅತಿ ಹೆಚ್ಚು ಹಾನಿಗೊಳಗಾಗಿರುವ ಮಂಡಿ ಜಿಲ್ಲೆಯ ಸಂಸದೆಯಾಗಿರುವ ಕಂಗನಾ ರಣಾವತ್ ಭಾನುವಾರ ತಮ್ಮ ಕ್ಷೇತ್ರದ ಸ್ಥಿತಿಗತಿಯನ್ನು ಪರಿಶೀಲಿಸಲು ಆಗಮಿಸಿದ್ದರು. ಈ ವೇಳೆ ಕೋಪೋದ್ರಿಕ್ತರಾದ ಮಂಡಿಯ ಸ್ಥಳೀಯ ಮಹಿಳೆಯೊಬ್ಬರು, “ನೀವು ಯಾಕೆ ಮೊದಲೇ ಬರಲಿಲ್ಲ? ನಮಗೆ ಅಗತ್ಯವಿದ್ದಾಗ ನೀವು ಮಾತನಾಡಿಸಲು ಕೂಡ ಬರಲಿಲ್ಲ. ಈಗೇಕೆ ಬಂದಿದ್ದೀರಿ? ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಹೋಗಲು ಬಂದಿದ್ದೀರಾ? ಫೋಟೋಶೋಟ್ ಮಾಡಿಸಿಕೊಂಡು ಹೋಗಿ” ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದರಿಂದ ತೀವ್ರ ಮುಜುಗರಕ್ಕೀಡಾದ ಬಿಜೆಪಿ ಸಂಸದೆ ಕಂಗನಾ ರಣಾವತ್ ಏನು ಹೇಳುವುದೆಂದು ತೋಚದೆ ತಮ್ಮ ಮುಖದ ಮೇಲಿನ ಬೆವರು ಒರೆಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಿಮಾಚಲ ಪ್ರದೇಶದಾದ್ಯಂತ ಮೇಘಸ್ಫೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತಗಳಿಂದ ಭಾರಿ ನಷ್ಟ ಸಂಭವಿಸಿದ್ದು, ಮಂಡಿ ಜಿಲ್ಲೆಯಲ್ಲಿ ಇದುವರೆಗೆ 14 ಜನರು ಸಾವನ್ನಪ್ಪಿದ್ದಾರೆ ಮತ್ತು 31 ಜನರು ಕಾಣೆಯಾಗಿದ್ದಾರೆ. ಈ ದುರಂತದಲ್ಲಿ 150ಕ್ಕೂ ಹೆಚ್ಚು ಮನೆಗಳು, 106 ದನದ ಕೊಟ್ಟಿಗೆಗಳು, 31 ವಾಹನಗಳು, 14 ಸೇತುವೆಗಳು ಮತ್ತು ಹಲವಾರು ರಸ್ತೆಗಳು ಹಾನಿಗೊಳಗಾಗಿವೆ. ಇದುವರೆಗೂ ಒಟ್ಟು 164 ಜಾನುವಾರುಗಳು ಸಾವನ್ನಪ್ಪಿವೆ. ಸುಮಾರು 200 ರಸ್ತೆಗಳನ್ನು ಸಂಚಾರಕ್ಕೆ ನಿಷೇಧಿಸಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ