Russia-Ukraine War: ನಿರ್ಬಂಧಗಳ ವಿರುದ್ಧ ಪ್ರತೀಕಾರಕ್ಕೆ ರಷ್ಯಾ ಸಿದ್ಧತೆ: 5 ಮಹತ್ವದ ಬೆಳವಣಿಗೆಗಳ ವಿವರ ಇಲ್ಲಿದೆ
ಉಕ್ರೇನ್ನ ಪೂರ್ವ ನಗರವಾದ ಸೆವೆರೊಡೊನೆಸ್ಟ್ಕ್ ನಲ್ಲಿ ರಷ್ಯಾ ಮಂಗಳವಾರ ನಡೆಸಿದ ದಾಳಿಗೆ ಸುಮಾರು 10 ಮಂದಿ ಬಲಿಯಾಗಿದ್ದಾರೆ ಎಂದು ಲುಗಾನ್ಸ್ಕ್ ಪ್ರಾದೇಶಿಕ ಆಡಳಿತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಷ್ಯಾ -ಉಕ್ರೇನ್ ಯುದ್ಧ (Russia-Ukraine War) 14ನೇ ದಿನಕ್ಕೆ ಕಾಲಿಟ್ಟಿದೆ. ಫೆ.24ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆ ಘೋಷಿಸಿದರು. ಅಂದಿನಿಂದಲೂ ರಷ್ಯಾ ಸೇನೆ ಉಕ್ರೇನ್ ನೆಲದಲ್ಲಿ ನಿಂತು ಆಕ್ರಮಣ ಮಾಡುತ್ತಿದೆ. ಈಗಾಗಲೇ ಹಲವು ಪ್ರದೇಶಗಳಲ್ಲಿ ವಸತಿ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಶಾಲೆ, ಆಸ್ಪತ್ರೆಗಳ ಮೇಲೆ ಕೂಡ ರಷ್ಯಾ ದಾಳಿ ಮಾಡಿದ್ದಾಗಿ ವರದಿಯಾಗಿದೆ. ಇನ್ನೊಂದೆಡೆ ಉಕ್ರೇನ್, ತಾವು ರಷ್ಯಾದ 10 ಸಾವಿರಕ್ಕೂ ಅಧಿಕ ಸೈನಿಕರನ್ನು ಕೊಂದಿದ್ದಾಗಿಯೂ ಹೇಳಿಕೊಂಡಿದೆ. ಈ ಯುದ್ಧದ ಭೂಮಿಯಲ್ಲಿ ನಡೆದ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ.
- ಉಕ್ರೇನ್ನ ಪೂರ್ವ ನಗರವಾದ ಸೆವೆರೊಡೊನೆಸ್ಟ್ಕ್ ನಲ್ಲಿ ರಷ್ಯಾ ಮಂಗಳವಾರ ನಡೆಸಿದ ದಾಳಿಗೆ ಸುಮಾರು 10 ಮಂದಿ ಬಲಿಯಾಗಿದ್ದಾರೆ ಎಂದು ಲುಗಾನ್ಸ್ಕ್ ಪ್ರಾದೇಶಿಕ ಆಡಳಿತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇಲ್ಲಿ ರಷ್ಯಾ ಸೈನ್ಯ ವಸತಿ ಕಟ್ಟಡಗಳು, ಜನರು ಇದ್ದ ಮನೆಗಳು ಮತ್ತು ಇತರ ಕಚೇರಿಗಳ ಮೇಲೆ ಗುಂಡಿನ ದಾಳಿ ನಡೆಸಿದೆ ಎಂದು ಮಾಹಿತಿ ನೀಡಿದ್ದಾರೆ.
- ಉಕ್ರೇನ್ ಮೇಲೆ ಯುದ್ಧ ಸೇರಿರುವ ರಷ್ಯಾದ ಮೇಲೆ ಅಮೆರಿಕ ಸೇರಿ ಇನ್ನಿತರ ರಾಷ್ಟ್ರಗಳು ಇನ್ನಷ್ಟು ನಿರ್ಬಂಧ ಹೇರುತ್ತಿವೆ. ಅದರಲ್ಲೂ ರಷ್ಯಾದ ಆದಾಯದ ಪ್ರಮುಖ ಮೂಲಗಳಾದ ತೈಲ ಮತ್ತು ಅನಿಲ ಆಮದಿನ ಮೇಲೆ ಅಮೆರಿಕ ಮಂಗಳವಾರ ನಿರ್ಬಂಧ ಹೇರಿದ ಬೆನ್ನಲ್ಲೇ ರಷ್ಯಾ ಖಡಕ್ ಎಚ್ಚರಿಕೆ ಕೊಟ್ಟಿದೆ. ನಮ್ಮ ಮೇಲೆ ಹೇರುವ ನಿರ್ಬಂಧಗಳಿಗೆ ನಾವು ಕೊಡುವ ಪ್ರತಿಕ್ರಿಯೆ ತುಂಬ ಕ್ಷಿಪ್ರವಾಗಿ ಇರಲಿದೆ. ಬಹುಸೂಕ್ಷ್ಮ ಕ್ಷೇತ್ರಗಳಲ್ಲಿ ನಾವು ತಿರುಗೇಟು ನೀಡುತ್ತೇವೆ ಎಂದು ಹೇಳಿದೆ.
- ರಷ್ಯಾ ಸೇನೆಯು ಮುತ್ತಿಗೆ ಹಾಕಿರುವ ಉಕ್ರೇನ್ನ ದಕ್ಷಿಣ ಬಂದರು ನಗರ ಮರಿಯುಪೋಲ್ ಮತ್ತು ಇತರ ಪ್ರದೇಶಗಳಿಂದ, ಒಟ್ಟು 6 ಮಾನವೀಯ ಕಾರಿಡಾರ್ಗಳ ಮೂಲಕ ನಾಗರಿಕರನ್ನು ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾಗಿ ಉಕ್ರೇನ್ ಉಪಪ್ರಧಾನಮಂತ್ರಿ ಐರಿನಾ ವೆರೆಶ್ಚುಕ್ ಹೇಳಿದ್ದಾರೆ. ಹಾಗೇ, ಈ ಪ್ರದೇಶಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9ಗಂಟೆವರೆಗೆ (ಭಾರತೀಯ ಕಾಲಮಾನ) ಗುಂಡಿನ ದಾಳಿ ನಡೆಸಲು ಉಕ್ರೇನ್ ಸಶಸ್ತ್ರಪಡೆಗಳು ಒಪ್ಪಿಗೆ ಸೂಚಿಸಿವೆ. ರಷ್ಯಾದ ಪಡೆಗಳೂ ಇದಕ್ಕೆ ಸಹಕರಿಸಬೇಕು. ಈಗಾಗಲೇ ಘೋಷಿಸಿರುವ ಕದನ ವಿರಾಮ ನಿಯಮಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕು ಎಂದೂ ಒತ್ತಾಯಿಸಿದ್ದಾರೆ.
- ಬ್ರಿಟನ್ ರಷ್ಯಾ ವಿರುದ್ಧ ಹೊಸ ಮಾದರಿಯ ವಾಯುಯಾನ ನಿರ್ಬಂಧ ವಿಧಿಸಿದೆ. ಈ ನಿರ್ಬಂಧ ಇದ್ದಾಗ ರಷ್ಯಾದ ಯಾವುದೇ ವಿಮಾನ ಬ್ರಿಟನ್ ವಾಯುಮಾರ್ಗದಲ್ಲಿ ಬಂದರೂ ಅದನ್ನು ಬ್ರಿಟನ್ನ ಸಂಬಂಧಪಟ್ಟ ಆಡಳಿತ ವಶಕ್ಕೆ ಪಡೆಯಬಹುದು. ಅಷ್ಟೇ ಅಲ್ಲ ರಷ್ಯಾಕ್ಕೆ ವಾಯುಯಾನಕ್ಕೆ ಸಂಬಂಧಿಸಿದ, ಬಾಹ್ಯಾಕಾಶ ಸಂಬಂಧಿ ಸರಕುಗಳನ್ನು ರಫ್ತು ಮಾಡುವುದಕ್ಕೂ ಬ್ರಿಟನ್ ನಿಷೇಧ ಹೇರಿದೆ. ರಷ್ಯಾದ ವಿಮಾನಗಳು ಯುಕೆಯ ವಾಯುಪ್ರದೇಶದಲ್ಲಿ ಹಾರಾಡುವುದು, ಯುಕೆ ನೆಲದಲ್ಲಿ ಲ್ಯಾಂಡ್ ಆಗುವುದು ಕ್ರಿಮಿನಲ್ ಎನ್ನಿಸಿಕೊಳ್ಳುತ್ತದೆ ಎಂದೂ ಹೇಳಿದೆ.
- ರಷ್ಯಾದ ಆಕ್ರಮಣಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವ ಉಕ್ರೇನ್ಗೆ 1.4 ಬಿಲಿಯನ್ ರೂಪಾಯಿಯನ್ನು ತುರ್ತು ನಿಧಿ ರೂಪದಲ್ಲಿ ಬಿಡುಗಡೆ ಮಾಡುವುದಕ್ಕೆ ಅನುಮೋದನೆ ನೀಡಲು ಅಂತಾರಾಷ್ಟ್ರೀಯ ಅಂತರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯಕಾರಿ ಮಂಡಳಿ ಸಿದ್ಧವಾಗಿದೆ ಎಂದು ಐಎಂಎಫ್ನ ಎಂಡಿ ಕ್ರಿಸ್ಟಲಿನಾ ಜಾರ್ಜಿವಾ ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್‌ನಿಂದ ಬಾಂಗ್ಲಾದೇಶಿಯರನ್ನು ರಕ್ಷಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದ ಶೇಖ್ ಹಸೀನಾ
Published On - 3:05 pm, Wed, 9 March 22