
ಬರ್ನ್, ಸೆಪ್ಟೆಂಬರ್ 11: ಪೂರ್ವ ಸ್ವಿಜರ್ಲೆಂಡ್‌ನ ಆಲ್ಪ್ಸ್ ಪರ್ವತ ಪ್ರದೇಶದಲ್ಲಿ ಡಚ್ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿಯಾದ ಭೀಕರ ಅಪಘಾತದಲ್ಲಿ 5 ಜನರು ಮೃತಪಟ್ಟಿದ್ದಾರೆ ಮತ್ತು 40 ಜನರು ಗಾಯಗೊಂಡಿದ್ದಾರೆ. ರಾಯಿಟರ್ಸ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಅಪಘಾತಕ್ಕೊಳಗಾದ ಡಚ್ ಪ್ರವಾಸಿ ಬಸ್‌ನಲ್ಲಿ ಒಟ್ಟು 48 ಜನರು ಪ್ರಯಾಣಿಸುತ್ತಿದ್ದರು. ಪೂರ್ವ ಸ್ವಿಜರ್ಲೆಂಡ್‌ನ ಗ್ರಾವುಬುಂಡೆನ್ ಕ್ಯಾಂಟನ್‌ನ ಸುಶ್ ಮತ್ತು ಜೆರ್ನೆಜ್ ನಡುವಿನ ಪರ್ವತದ ರಸ್ತೆಯಲ್ಲಿ ಬಸ್ ಸಂಚರಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದು, ನಂತರ ತಗ್ಗಿನ ಪ್ರಪಾತಕ್ಕೆ ಉರುಳಿ ಬಿದ್ದಿದೆ.
ಗಾಯಗೊಂಡ 40 ಪ್ರವಾಸಿಗರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದರೆ, 7 ಜನರಿಗೆ ತೀವ್ರ ಗಾಯಗಳಾಗಿವೆ ಮತ್ತು 30 ಪ್ರವಾಸಿಗರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಪ್ರವಾಸ ಸಂಘಟಕ ‘ಒಎಡಿ’ ವಕ್ತಾರರ ಪ್ರಕಾರ, ಬಸ್‌ನಲ್ಲಿದ್ದ ಎಲ್ಲಾ 48 ಪ್ರಯಾಣಿಕರೂ ನೆದರ್ಲೆಂಡ್ಸ್ ದೇಶದ ನಾಗರಿಕರಾಗಿದ್ದಾರೆ. ಈ ಭೀಕರ ದುರಂತಕ್ಕೆ ‘ಒಎಡಿ’ ಸಂಸ್ಥೆ ಮತ್ತು ನೆದರ್ಲೆಂಡ್ಸ್ ವಿದೇಶಾಂಗ ಸಚಿವಾಲಯ ತೀವ್ರ ಸಂತಾಪ ವ್ಯಕ್ತಪಡಿಸಿವೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ತಾಯಿ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಗು ದುರಂತ ಅಂತ್ಯ
ಗಾಯಗೊಂಡ 40 ಜನರ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. 7 ಜನರು ಸಾಧಾರಣ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರೆ, 30 ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೃತಪಟ್ಟವರೆಲ್ಲರೂ ವಯಸ್ಕರಾಗಿದ್ದು, ಅವರ ಗುರುತನ್ನು ಇನ್ನಷ್ಟೇ ಪತ್ತೆಹಚ್ಚಬೇಕಿದೆ.
ಸ್ವಿಜರ್ಲೆಂಡ್ ಅಧ್ಯಕ್ಷ ಗೈ ಪಾರ್ಮೆಲಿನ್ ಈ ದುರಂತಕ್ಕೆ ಸಂತಾಪ ಸೂಚಿಸಿದ್ದು, ಘಟನೆಯ ಕುರಿತು ಸ್ವಿಸ್ ಆಡಳಿತವು “ಸಂಪೂರ್ಣ ಮತ್ತು ಸಮಗ್ರ ತನಿಖೆ” ನಡೆಸಲಿದೆ ಎಂದು ಭರವಸೆ ನೀಡಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ